ಬೆಂಗಳೂರು: ಕಳೆದ ವಾರವಿಡೀ ರಾಜ್ಯದ ಹಲವು ಭಾಗಗಳಲ್ಲಿ ತುಂತುರು ಮಳೆಯ ದರ್ಶನವಾಗಿತ್ತು. ಈ ವಾರ ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಯಿದೆ ಇಲ್ಲಿದೆ ಸಂಪೂರ್ಣ ಹವಾಮಾನ ವರದಿ.
ರಾಜ್ಯದಲ್ಲಿ ಈ ವಾರವೂ ಅತೀ ಹೆಚ್ಚು ಮಳೆಯ ಸಾಧ್ಯತೆಯಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಕಳೆದ ಎರಡು ವಾರಗಳಿಂದ ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗಿದೆ. ಈ ವಾರವೂ ಗುಡುಗು ಸಹಿತ ಮಳೆಯ ಸೂಚನೆಯಿದೆ. ಈ ವಾರವಿಡೀ ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ.
ದಕ್ಷಿಣ ಕನ್ನಡ ಹೊರತುಪಡಿಸಿದರೆ ಕೊಡಗಿನಲ್ಲೂ ಈ ವಾರ ಭಾರೀ ಗುಡುಗು ಸಹಿತ ಮಳೆ ನಿರೀಕ್ಷಿಸಲಾಗಿದೆ. ಉಡುಪಿ ಜಿಲ್ಲೆಗೆ ಈ ವಾರ ಅಷ್ಟೊಂದು ಮಳೆಯ ಸೂಚನೆಯಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಬುಧವಾರದಿಂದ ಮಳೆಯ ಸೂಚನೆಯಿದೆ. ಉಳಿದಂತೆ ಹಾವೇರಿ ಜಿಲ್ಲೆಯಲ್ಲಿ ಈ ವಾರವಿಡೀ ತಕ್ಕಮಟ್ಟಿಗೆ ಮಳೆಯಾಗಲಿದೆ.
ಉಳಿದಂತೆ ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮತ್ತು ಬಿಸಿಲಿನ ಝಳ ಮುಂದುವರಿಯಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.