ಬೆಂಗಳೂರು: ರಾಜ್ಯದಲ್ಲಿ ಇದೀಗ ಮುಂಗಾರು ಪೂರ್ವ ಮಳೆಯ ಆಗಮನವಾಗಿದೆ. ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಇನ್ನೊಂದೆಡೆ ತಾಪಮಾನವೂ ಗರಿಷ್ಠ ಮಟ್ಟದಲ್ಲಿದೆ. ಇಂದು ಯಾವೆಲ್ಲಾ ಜಿಲ್ಲೆಗಳಿಗೆ ಮಳೆಯಾಗಲಿದೆ ಮತ್ತು ದಕ್ಷಿಣ ಕನ್ನಡಕ್ಕೆ ವಿಶೇಷವಾಗಿ ಹವಾಮಾನ ವರದಿಗಳು ನೀಡುತ್ತಿರುವ ಎಚ್ಚರಿಕೆಯೇನು ಇಲ್ಲಿದೆ ನೋಡಿ ವಿವರ.
ಕರ್ನಾಟಕದ ಬಹುತೇಕ ಕಡೆ ಈಗಾಗಲೇ ಮುಂಗಾರು ಪೂರ್ವ ಮಳೆಯ ಆಗಮನವಾಗಿದೆ. ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕೆಲವು ಕಡೆ ಹನಿ ಮಳೆಯಾಗಿತ್ತು. ಇಂದೂ ಕೂಡಾ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ಮಳೆಯ ಸೂಚನೆಯಿದೆ.
ದಕ್ಷಿಣ ಕನ್ನಡದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ನಿನ್ನೆಯೂ ಬೆಳ್ಳಂ ಬೆಳಿಗ್ಗೆಯೇ ಮಳೆರಾಯನ ಅಬ್ಬರವಿತ್ತು. ಇಂದೂ ದಕ್ಷಿಣ ಕನ್ನಡದಲ್ಲಿ ಮಳೆಯ ಸೂಚನೆಯಿದೆ. ನಿನ್ನೆ ಗುಡುಗು ಸಹಿತ ಮಳೆಯಾಗಿತ್ತು. ಇಂದೂ ಕೂಡಾ ಹೆಚ್ಚು ಕಡಿಮೆ ಇದೇ ವಾತಾವರಣವಿರಲಿದೆ. ಇನ್ನೊಂದು ವಾರಗಳಿಗೆ ಕರಾವಳಿ ಜಿಲ್ಲೆಯಲ್ಲಿ ಮಳೆಯ ಅಬ್ಬರವಿರಲಿದ್ದು, ಕಡಲ ತೀರಗಳಿಗೆ ಹೋಗದೇ ಇರುವುದು ಉತ್ತಮ.
ಉಳಿದಂತೆ ಇಂದು ಉಡುಪಿ, ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು, ಕೊಡಗು, ಕೋಲಾರ, ತುಮಕೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಿಗೂ ಇಂದು ಮಳೆಯಾಗುವ ಸೂಚನೆಯಿದೆ. ಉಳಿದಂತೆ ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 32 ಡಿಗ್ರಿ ತಲುಪುವ ನಿರೀಕ್ಷೆಯಿದೆ.