ಬೆಂಗಳೂರು: ನಿನ್ನೆ ಬೆಳಿಗ್ಗೆಯಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವೆಡೆ ಮಳೆಯಾಗಿದ್ದು ಇನ್ನು ಎಷ್ಟು ದಿನದವರೆಗೆ ಮಳೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ತಮಿಳುನಾಡಿನ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ನಿನ್ನೆ ಬೆಳಿಗ್ಗೆಯಿಂದ ತುಂತುರು ಮಳೆಯಾಗುತ್ತಿದೆ. ಆದರೆ ಇಂದು ಬೆಳಿಗ್ಗೆ ವಾತಾವರಣ ತಿಳಿಯಾಗಿದೆ. ಹಾಗಿದ್ದರೂ ರಾಜ್ಯ ಬೇರೆ ಕೆಲವು ಭಾಗಗಳಲ್ಲಿ ಇಂದು ಮಳೆಯ ಸಾಧ್ಯತೆಯಿದೆ ಎನ್ನಲಾಗಿದೆ. ಈ ವಾತಾವರಣ ಇನ್ನೂ ಎರಡು ದಿನಗಳ ಕಾಲ ಈ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ವಾಯುಭಾರ ಕುಸಿತದ ಪರಿಣಾಮ ಕೇವಲ ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತದ ರಾಜ್ಯಗಳಿಗೆ ತಟ್ಟಲಿದೆ. ಕೇರಳ, ತಮಿಳುನಾಡಿನಲ್ಲೂ ಎರಡು ದಿನಗಳ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈಗಾಗಲೇ ಕರ್ನಾಟಕದಲ್ಲಿ ಶೀತ ಹವೆ ಜೋರಾಗಿತ್ತು. ಇದರ ನಡುವೆ ಈಗ ತುಂತುರು ಮಳೆಯೂ ಸೇರಿರುವುದರಿಂದ ಥಂಡಿ ಹವೆ ಹೆಚ್ಚಾಗಿದೆ. ಬೆಂಗಳೂರು ಗ್ರಾಮಾಂತರ, ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ದಾವಣೆಗೆರೆ ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಹಾಗೂ ಕರಾವಳಿ ಜಿಲ್ಲೆಗಳಲ್ಲೂ ಎರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಜೊತೆಗೆ ದಟ್ಟ ಮೋಡ, ಮಂಜು ಬೀಳುವ ಸಾಧ್ಯತೆಯೂ ಇದೆ. ಬಂಗಾಳಕೊಲ್ಲಿಯಲ್ಲಿ ತೇವಾಂಶ ಭರಿತ ಮೋಡ ಮತ್ತು ವಾಯು ಭಾರ ಕುಸಿತದಿಂದ ವಾತಾವರಣದಲ್ಲಿ ಈ ದಿಡೀರ್ ಬದಲಾವಣೆಯಾಗಿದೆ.