ಬೆಂಗಳೂರು: ಕರ್ನಾಟಕದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಅಲ್ಲಲ್ಲಿ ಚಂಡಮಾರುತದಿಂದಾಗಿ ಮಳೆಯಾಗಿತ್ತು. ಮುಂದಿನ ದಿನಗಳಲ್ಲಿ ಮಳೆಯಿರಲಿದೆಯಾ ಎಂಬ ಬಗ್ಗೆ ಇಲ್ಲಿದೆ ಹವಾಮಾನ ವರದಿ.
ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಚಂಡಮಾರುತದಿಂದಾಗಿ ಕರ್ನಾಟಕದ ಕರಾವಳಿ ಜಿಲ್ಲೆ, ಚಿಕ್ಕಮಗಳೂರು ಸೇರಿದಂತೆ ಕೆಲವೆಡೆ ಕಳೆದ ನಾಲ್ಕು ದಿನಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಿತ್ತು.
ಜನವರಿ 16 ರವರೆಗೆ ಮಳೆಯ ಮುನ್ಸೂಚನೆ ನೀಡಲಾಗಿತ್ತು. ಇಂದಿನಿಂದ ಮಳೆಯ ಲಕ್ಷಣಗಳಿಲ್ಲ. ಶುಭ್ರ ಆಕಾಶವಿರಲಿದ್ದು, ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ವರದಿ ಹೇಳಿದೆ. ಇನ್ನು ಕೆಲವು ದಿನಗಳಿಗೆ ಚಳಿಯ ವಾತಾವರಣವಿರಲಿದೆ.
ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಉಡುಪಿ, ಧಾರವಾಡ, ಗದಗ, ಕಲಬುರಗಿ ಜಿಲ್ಲೆಗಳಲ್ಲಿ ವಿಪರೀತ ಚಳಿ ಮುಂದುವರಿಯಲಿದೆ.
ಚಾಮರಾಜನಗರದಲ್ಲಿ ಅತ್ಯಂತ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿದ್ದು ಕನಿಷ್ಠ ತಾಪಮಾನ 16 ಡಿಗ್ರಿಯಷ್ಟು ದಾಖಲಾಗಿದೆ. ಮುಂದಿನ ನಾಲ್ಕೈದು ದಿನದವರೆಗೆ ಈ ವಾತಾವರಣ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.