ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ತಾಪಮಾನ ನಿಧಾನವಾಗಿ ಏರಿಕೆಯಾಗುತ್ತಿದ್ದು ಇದೀಗ ಬೆಂಗಳೂರಿನಲ್ಲಿ ತಾಪಮಾನದಲ್ಲಿ ಭಾರೀ ಬದಲಾವಣೆಯಾಗಿದೆ.
ಕಳೆದ ವಾರ ಕನಿಷ್ಠ ತಾಪಮಾನದಿಂದಾಗಿ ರಾಜ್ಯದ ಹಲವೆಡೆ ವಿಪರೀತ ಚಳಿಯಿತ್ತು. ಆದರೆ ಈಗ ರಾಜ್ಯದ ವಿವಿಧ ಭಾಗದಲ್ಲಿ ವಿಪರೀತ ಏರಿಕೆಯಾಗಿದ್ದು ಬೇಸಿಗೆ ಶುರುವಾಗಿದೆ ಎನ್ನಬಹುದು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಬೇಸಿಗೆ ನಿಧಾನವಾಗಿ ಶುರುವಾಗಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಬೇಸಿಗೆ ಜನರು ಬವಣೆ ಪಡುವಂತೆ ಮಾಡಿತ್ತು. ಒಂದೆಡೆ ಮಳೆಯ ಕೊರತೆ ಇನ್ನೊಂದೆಡೆ ವಿಪರೀತ ಬಿಸಿಲು, ಸೆಖೆಯಿಂದಾಗಿ ಇದು ನಿಜವಾಗಿಯೂ ಬೆಂಗಳೂರು ಹೌದೋ ಅಲ್ಲವೋ ಎನ್ನುವಂತೆ ಮಾಡಿತ್ತು. ಈ ವರ್ಷ ಫೆಬ್ರವರಿಯಲ್ಲೇ ಬೇಸಿಗೆ ಶುರುವಾಗಿದ್ದು, ಈ ಬಾರಿಯೂ ಬೇಸಿಗೆ ಬಿರುಸಾಗುವ ಸೂಚನೆ ಸಿಕ್ಕಿದೆ.
ಸಂಜೆ ಕೊಂಚ ತಂಪು ವಾತಾವರಣ, ಒಣ ಹವೆಯಿದ್ದರೆ ಹಗಲು ಬಿಸಿಲಿನ ಝಳ ವಿಪರೀತವಾಗಿದೆ. ಈ ಬಾರಿ ಫೆಬ್ರವರಿ ತಿಂಗಳಿಗಿಂತ ಸಾಮಾನ್ಯವಾಗಿ ಇರುವುದಕ್ಕಿಂತಲೂ 4-5 ಡಿಗ್ರಿ ಸೆಲ್ಶಿಯಸ್ ನಷ್ಟು ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಇದೀಗ ತಾಪಮಾನ 29 ಡಿಗ್ರಿಯವರೆಗೆ ತಲುಪಿದ್ದು, ಮಾರ್ಚ್ ವೇಳೆಗೆ ಇನ್ನಷ್ಟು ಏರಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಮಧ್ಯಾಹ್ನದ ವೇಳೆ ಹೊರಗೆ ಓಡಾಡುವುದನ್ನು ಆದಷ್ಟು ತಪ್ಪಿಸಿದರೆ ಉತ್ತಮ.