ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಹವಾಮಾನದಲ್ಲಿ ಭಾರೀ ಬದಲಾವಣೆಯಾಗಲಿದೆ. ಇಂದಿನ ಹವಾಮಾನ ಪ್ರಕಾರ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಇಲ್ಲಿದೆ ಸಂಪೂರ್ಣ ವಿವರ.
ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬೇಸಿಗೆ ಮಳೆಯಾಗಿತ್ತು. ಇದೀಗ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಹಾಗಿದ್ದರೂ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಲೇ ಇದೆ.
ಇದೀಗ ನಿಜವಾಗಿಯೂ ಮುಂಗಾರು ಆಗಮನದ ಸಮಯ. ಲೆಕ್ಕಾಚಾರಗಳು ಸರಿಯಾಗಿದ್ದರೆ ಇಂದು ಅಥವಾ ನಾಳೆ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಬೇಕಿದೆ. ಇಂದಿನಿಂದ ರಾಜ್ಯದ ಗರಿಷ್ಠ ತಾಪಮಾನ 24 ಡಿಗ್ರಿಗೆ ಕುಸಿಯಲಿದೆ. ಮುಂದಿನ ಒಂದು ವಾರವೂ ಭಾರೀ ಮಳೆಯ ಸೂಚನೆಯಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಉಳಿದಂತೆ ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಉತ್ತರ ಕನ್ನಡ, ಮಂಡ್ಯ, ಶಿವಮೊಗ್ಗ, ಗದಗ, ಹಾವೇರಿ, ತುಮಕೂರು, ಬೀದರ್, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.