ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಿಗ್ ರಿಲೀಫ್: ಸತ್ಯಮೇವ ಜಯತೇ ಎಂದ ಯಡಿಯೂರಪ್ಪ

ಬುಧವಾರ, 26 ಅಕ್ಟೋಬರ್ 2016 (12:33 IST)
ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಿಗ್ ರಿಲೀಫ್ ದೊರೆತ ಹಿನ್ನೆಲೆಯಲ್ಲಿ ನನ್ನ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನೆಮ್ಮದಿ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
 
ಸಿವಿಲ್ ನ್ಯಾಯಾಲಯದ ಎದುರು ಮಾತನಾಡಿದ ಅವರು, ಕಿಕ್ ಬ್ಯಾಕ್ ಪ್ರಕರಣದಲ್ಲಿ ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡಿದ್ದಾರೆ ಎಂದು ಸಾಬೀತಾಗಿದೆ. ನ್ಯಾಯಾಲಯ ನೀಡಿದ ತೀರ್ಪು ಸತ್ಯಕ್ಕೆ ಸಂದ ಜಯ ಎಂದು ಹೇಳಿದರು. 
 
ಸಿವಿಲ್ ಕೋರ್ಟ್ ನೀಡಿದ ತೀರ್ಪಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಳೆದು ಐದು ವರ್ಷದಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತು . ಈ ತೀರ್ಪಿನಿಂದ ನನಗೆ ಆನೆ ಬಲ ಬಂದಂತಾಗಿದ್ದು, ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಸಮಾಧಾನ ತಂದಿದೆ ಎಂದು ಹೇಳಿದರು.
 
ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರರಾದ ಬಿ. ವೈ ರಾಘವೇಂದ್ರ, ಬಿ.ವೈ ವಿಜಯೇಂದ್ರ, ಅಳಿಯ ಆರ್. ಎನ್ ಸೋಹನ್ ಕುಮಾರ್, ಜಿಂದಾಲ್ ಕಂಪನಿ ಅಧಿಕಾರಿಗಳು ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳು ದೋಷಮುಕ್ತರೆಂದು ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ.
 
ಸಿಬಿಐ ನ್ಯಾಯಾಲಯದ ಜಡ್ಜ್ ಆರ್. ಬಿ ಧರ್ಮಗೌಡರ್ ಈ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು ಯಡ್ಡಿ ನಿದ್ದೆಗೆಡಿಸಿದ್ದ ಆಪಾದನೆಯಿಂದ ಅವರನ್ನು ಮುಕ್ತಗೊಳಿಸಿದ್ದಾರೆ. ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಕಟಕಟೆಯಲ್ಲಿ  ಬಿಕ್ಕಳಿಸಿದ್ದ ಯಡ್ಡಿ ಇಂದು ಅದೇ ನ್ಯಾಯಾಲಯದಲ್ಲಿ ವಿಜಯನದ ನಗು ಬೀರಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ