ತುಮಕೂರು : ಓಮಿಕ್ರಾನ್ ಆತಂಕದ ನಡುವೆ ತುಮಕೂರು ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ನಿಧಾನವಾಗಿ ಏರುತ್ತಿದೆ.
10 ದಿನದಲ್ಲಿ 109 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲೂ 42 ಜನ ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಹೌದು. ಕೋವಿಡ್ 2ನೇ ಅಲೆಯಲ್ಲಿ ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಹಾಗೂ ಸಾವಿನಿಂದಾಗಿ ತುಮಕೂರು ಜಿಲ್ಲೆ ತಲ್ಲಣಗೊಂಡಿತ್ತು. ಕಳೆದ ಎರಡ್ಮೂರು ತಿಂಗಳಿಂದ ಪಾಸಿಟಿವ್ ಪ್ರಕರಣ ಒಂದಂಕಿಗೆ ಇಳಿದಿತ್ತು. ಆದರೆ ಕಳೆದ 10 ದಿನದಲ್ಲಿ ಮತ್ತೆ ಸೋಂಕು ಏರಿಕೆ ಕಂಡಿದೆ.
ಆತಂಕದ ಸಂಗತಿ ಏನೆಂದರೆ ಕಳೆದ 10 ದಿನದಲ್ಲಿ 1 ರಿಂದ 18 ವರ್ಷದೊಳಗಿನ 42 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಮಕ್ಕಳಲ್ಲಿ ಗಂಭೀರ ಸ್ವರೂಪದ ಲಕ್ಷಣ ಇಲ್ಲದೇ ಇದ್ದರೂ ಪೋಷಕರಲ್ಲಿ ಆತಂಕ ಶುರುವಾಗಿದೆ.
ಕಳೆದ 15 ದಿನಗಳಿಂದ ವಾತಾವರಣದಲ್ಲಿ ವೈಪರೀತ್ಯ ಏರಿಳಿತವಾಗುತ್ತಿರುವುದು ಸಹ ಮಕ್ಕಳಲ್ಲಿ ಸೋಂಕು ಹೆಚ್ಚಾಗಲು ಕಾರಣವಾಗಿದೆ. ಅಲ್ಲದೇ ಪೋಷಕರ ಮೂಲಕವೂ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ ಎನ್ನಲಾಗ್ತಿದೆ. ಜೊತೆಗೆ ಶಾಲೆ ಆರಂಭವಾಗಿರುವುದರಿದ ಮಕ್ಕಳ ಓಡಾಟವೂ ಹೆಚ್ಚಾಗಿ ಸೋಂಕು ಹೆಚ್ಚಾಗಿದೆ.
ಪಾಸಿಟಿವ್ ಪ್ರಕರಣ ಹೆಚ್ಚಾಗುತಿದ್ದಂತೆ ಜಿಲ್ಲಾಡಳಿತ ಕೂಡ ಅಲರ್ಟ್ ಆಗಿದೆ. ಹೆಚ್ಚುವರಿಯಾಗಿ ಮಕ್ಕಳ ಐಸಿಯು ಬೆಡ್, ಜನರಲ್ ಆಕ್ಸಿಜನ್ ಬೆಡ್ಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಸೂಚಿಸಿದೆ. ಕಳೆದ ಬಾರಿ ಉಂಟಾದ ಎಡವಟ್ಟು ಮರುಕಳಿಸದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಮೂರನೇ ಅಲೆ ಎದುರಿಸಲು ಸನ್ನದ್ದವಾಗಿದೆ.