ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಹಾವಳಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಮತ್ತೆ ಕೋವಿಡ್ ಸುರಕ್ಷತಾ ನಿಯಮಗಳನ್ನು ಬಿಗಿಗೊಳಿಸುತ್ತಿವೆ. ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಹೊರ ದೇಶಗಳಿಂದ ಭಾರತಕ್ಕೆ ಬರುವ ಪ್ರಜೆಗಳ ಕಡ್ಡಾಯ ಪರೀಕ್ಷೆಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲೂ ಸಹ ಹೊರ ದೇಶಗಳಿಂದ ಬರುವರ ಮೇಲೆ ಹೆಚ್ಚಿನ ನಿಗಾ ಜತೆಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.
ಅದರಂತೆ ಯುನೈಟೆಡ್ ಕಿಂಗ್ ಡಮ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಚೈನಾ, ನ್ಯೂಜಿಲಾಂಡ್, ಜಿಂಬಾಂಬ್ವೆ, ಸಿಂಗಪೂರ್, ಹಾಂಕಾಂಗ್ ಮತ್ತು ಇಸ್ರೇಲ್ ಮತ್ತಿತರ ರಾಷ್ಟ್ರಗಳಿಂದ ಬರುವರ ಮೇಲೆ ಪೋಸ್ಟ್ ಕೋವಿಡ್ ಪರೀಕ್ಷೆ ಜತೆಗೆ ಹೆಚ್ಚುವರಿ ಸುರಕ್ಷತಾ ಕ್ರಮ ಪಾಲನೆ ಮಾಡಲು ಸೂಚನೆ ನೀಡಲಾಗಿದೆ. ಓಮಿಕ್ರಾನ್ ರೂಪಾಂತರ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಅನೇಕ ರಾಷ್ಟ್ರಗಳು ಸುರಕ್ಷತಾ ಕ್ರಮ ಬಿಗಿಗೊಳಿಸಲು ಮುಂದಾಗಿವೆ.