ಹುಬ್ಬಳ್ಳಿ: ಸ್ನೇಹಿತನಿಂದ ಹತ್ಯೆಗೊಳಗಾದ ನೇಹಾ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಸುಮ್ಮನಿದ್ದರೆ ಸರ್ಕಾರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದು ಸಿಎಂ ಅವರು ಕಣ್ಣೊರೆಸುವ ತಂತ್ರವಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಇಂದು ನಗರದ ಬಿಡ್ನಾಳದಲ್ಲಿರುವ ಮೃತ ನೇಹಾ ಹಿರೇಮಠ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸಿಎಂ ಸಿದ್ದರಾಮಯ್ಯ ಅವರು ಒಂದು ಹೆಣ್ಣು ಮಗುವಿನ ಹತ್ಯೆಗೆ ನ್ಯಾಯ ಒದಗಿಸಿದ ಹಾಗೇ ಆಗುತ್ತದೆ. ಸಿಐಡಿ ತನಿಖೆಯಿಂದ ಈ ಪ್ರಕರಣಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ. ಕೊಲೆಗಡುಕನಿಗೆ ಕಠಿಣ ಶಿಕ್ಷೆಯಾಗಲು ಈ ಪ್ರಕರಣ ಸಿಬಿಐಗೆ ಒಪ್ಪಿಸಲೇಬೇಕು ಎಂದು ಆಗ್ರಹಿಸಿದರು.
ಸದ್ಯ ಕಾಂಗ್ರೆಸ್ ಆಡಳಿತದಲ್ಲಿ ಮುಸ್ಲಿಮರ ರಕ್ಷಣೆಯಾಗುತ್ತಿದೆ. ಹೆಣ್ಣನ್ನು ಕೊಲೆ ಮಾಡಿದವನ್ನು ಒಂದು ನಿಮಿಷವೂ ಯೋಚನೆ ಮಾಡದೆ ಎನ್‌ಕೌಂಟರ್ ಮಾಡಬೇಕಿತ್ತು. ಹಿಂದೂಗಳ ಕೊಲೆಯೆಂದರೆ ಕಾಂಗ್ರೆಸ್‌ಗೆ ಮಾಮೂಲಿಯಾಗಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.