ಡಿ.11ರಂದು ರಾಜ್ಯ ಉಪನ್ಯಾಸಕರ ಅರ್ಹತೆಯ ಕೆ-ಸೆಟ್ ಪರೀಕ್ಷೆ

ಗುರುವಾರ, 8 ಡಿಸೆಂಬರ್ 2016 (10:00 IST)
ಕರ್ನಾಟಕ ರಾಜ್ಯ ಉಪನ್ಯಾಸಕರ ಆರ್ಹತಾ ಕೆ-ಸೆಟ್-2016 ಪರೀಕ್ಷೆಯು ಡಿಸೆಂಬರ್ 11ರಂದು ರವಿವಾರ ಗುಲಬರ್ಗಾ ವಿಶ್ವವಿದ್ಯಾಲಯ ಆವರಣ ಸೇರಿದಂತೆ ಕಲಬುರಗಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ, ಸರ್ಕಾರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ, ನೂತನ ಪದವಿ ಮಹಾವಿದ್ಯಾಲಯ, ವಿ.ಜಿ. ಮಹಿಳಾ ಮಹಾವಿದ್ಯಾಲಯ, ಎಂ.ಎಸ್.ಐ. ಪದವಿ ಮಹಾವಿದ್ಯಾಲಯ ಹಾಗೂ ಶರಣ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯಗಳಲ್ಲಿ ಪರೀಕ್ಷೆಗಳು ಜರುಗಲಿವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷಾ ಕೇಂದ್ರದ ನೋಡಲ್ ಅಧಿಕಾರಿ ಪ್ರೊ. ಬಿ.ಎಂ. ಕನಳ್ಳಿ ತಿಳಿಸಿದ್ದಾರೆ. 
 
ಒಟ್ಟು 39 ವಿಷಯಗಳಿಗೆ ಸಂಬಂಧಿಸಿದಂತೆ ಸದರಿ ಪರೀಕ್ಷೆಯು ನಡೆಯಲಿದೆ. ಪ್ರಥಮ ಮತ್ತು ದ್ವಿತೀಯ ಪತ್ರಿಕೆಯು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.15 ಗಂಟೆಯವರೆಗೆ ಹಾಗೂ ಮೂರನೇ ಪತ್ರಿಕೆಯು ಮಧ್ಯಾಹ್ನ 1.30 ರಿಂದ ಸಾಯಂಕಾಲ 4 ಗಂಟೆಯವರೆಗೆ ನಡೆಯಲಿದೆ. ಯು.ಜಿ.ಸಿ. ನೆಟ್ ಪರೀಕ್ಷೆಯ ಮಾದರಿಯಲ್ಲಿ ಸದರಿ ಪರೀಕ್ಷೆಯು ಬಹು ಆಯ್ಕೆಯಿಂದ ಕೂಡಿದ್ದು, ಅಭ್ಯರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳಿಗಾಗಿ ಕೆಸೆಟ್ https://kset.uni-mysore.ac.in/previous-q-a ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ. 
 
ಸದರಿ ಪರೀಕ್ಷೆಗಾಗಿ ಒಟ್ಟು 6801 ವಿದ್ಯಾರ್ಥಿಗಳು ಗುಲಬರ್ಗಾ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡಿದ್ದು, ಕಳೆದ ಸಾಲಿನ ವಿದ್ಯಾರ್ಥಿಗಳಿಗಿಂತ 1470 ಕಡಿಮೆ ವಿದ್ಯಾರ್ಥಿಗಳು ಈ ಸಲ ಪರೀಕ್ಷೆಗೆ ಹಾಜರಾಗಲಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ ಅತೀ ಹೆಚ್ಚಿನ ಅಂದರೆ 897 ಅಭ್ಯರ್ಥಿಗಳು ಕನ್ನಡ ವಿಷಯದಲ್ಲಿ, 712 ಅಭ್ಯರ್ಥಿಗಳು ಇತಿಹಾಸ ಪರೀಕ್ಷೆಗೆ ಹಾಜರಾಗಲಿದ್ದಾರೆ. 
 
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳು ಹಾಗೂ ಇತರ ಮಾಹಿತಿಯನ್ನು ಮೈಸೂರು ವಿಶ್ವವಿದ್ಯಾಲಯ ಕೆ-ಸೆಟ್ ವೆಬ್‍ಸೈಟ್ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ವೆಬ್‍ಸೈಟ್‍ನ್ನು ನೋಡಬಹುದು. ಎಲ್ಲಾ ಅಭ್ಯರ್ಥಿಗಳು ಪರೀಕ್ಷೆಗೆ ಸರಿಯಾಗಿ 8.30 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿ ಹಾಗೂ ಕಡ್ಡಾಯವಾಗಿ ಪರೀಕ್ಷೆಯ ಪ್ರವೇಶ ಪತ್ರವನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮೇಲ್ಕಂಡ ವೆಬ್‍ಸ್ಶೆಟ್‍ಗಳನ್ನು ಸಂಪರ್ಕಿಸಬಹುದು. 
 
ಯಾವುದೇ ಕಾರಣದಿಂದ ಪರೀಕ್ಷಾ ಪ್ರವೇಶ ಪತ್ರ ಇರದ ಪಕ್ಷದಲ್ಲಿ ಅಭ್ಯರ್ಥಿಗಳು ತಾವು ಅರ್ಜಿ ಶುಲ್ಕ ಸಂದಾಯ ಮಾಡಿದ ರಸೀದಿ, ವಿಳಾಸದ ದೃಢೀಕರಣ ಹಾಗೂ ಪಾಸ್‍ಪೋರ್ಟ ಸೈಜಿನ ಭಾವಚಿತ್ರ ಲಗತ್ತಿಸಿ ಸೂಕ್ತ ಕಾರಣಗಳೊಂದಿಗೆ ನೋಡಲ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಬೇಕು. ದಾಖಲಾತಿಗಳನ್ನು ಪರಿಶೀಲಿಸಿ ಮನದಟ್ಟಾದ ನಂತರ ಪರೀಕ್ಷೆಯ ಪ್ರವೇಶ ಪತ್ರ ವಿತರಿಸಲಾಗುವುದು. ಎಲ್ಲಾ ಪರೀಕ್ಷಾರ್ಥಿಗಳು ವಿಶೇಷವಾಗಿ ತಮ್ಮ ವಿಷಯ ಹಾಗೂ ನೋಂದಣಿ ಸಂಖ್ಯೆಯು ಯಾವ ಪರೀಕ್ಷಾ ಉಪ-ಕೇಂದ್ರದಲ್ಲಿ ಇದೆ ಎನ್ನುವುದನ್ನು ನಿಖರವಾಗಿ ಖಚಿತಪಡಿಸಿಕೊಂಡೇ ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕೆಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ