ಬೆಂಗಳೂರು : ಹಲಗೇವಡೇರಹಳ್ಳಿ ನೋಟಿಫಿಕೇಶನ್ ಪ್ರಕರಣದ ವಿಚಾರಣೆಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮತ್ತೊಮ್ಮೆ ಗೈರಾಗಿದ್ದಾರೆ.
ಅಧಿಕ ರಕ್ತದೊತ್ತಡ ಕಾರಣ ನೀಡಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿದೆ.
ಫೆ.16ರ ವಿಚಾರಣೆಗೆ ಕುಮಾರಸ್ವಾಮಿ ಗೈರಾಗಿದ್ದರು. ಈ ಸಂದರ್ಭದಲ್ಲಿ ಕೋರ್ಟ್ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿ ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಿತ್ತು. ಹಲವು ಬಾರಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಖುದ್ದು ಹಾಜರಾಗುವಂತೆ ಸೂಚಿಸಿತ್ತು.
ಕುಮಾರಸ್ವಾಮಿ ಸಿಎಂ ಆಗಿದ್ದಾಗ 2006 ರಲ್ಲಿ ಕಾನೂನು ಬಾಹಿರವಾಗಿ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ಬಳಿ ಸರ್ವೇ ನಂಬರ್ 128, 130 ರಲ್ಲಿ 2.24 ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದರು. ಈ ಡಿನೋಟಿಫಿಕೇಶನ್ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚಾಮರಾಜನಗರ ಮೂಲದ ರೈತ ಮಹದೇವಸ್ವಾಮಿ ಲೋಕಾಯುಕ್ತದಲ್ಲಿ 2012ರಲ್ಲಿ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು 2018ರಲ್ಲಿ ಬಿ ರಿಪೋರ್ಟ್ ಸಲ್ಲಿಸಿದರು.