ಸ್ವಯಂಪ್ರೇರಿತವಾಗಿ ಎಸ್ಐಟಿ ಕಚೇರಿಗೆ ಬಂದ ಕುಣಿಗಲ್ ಗಿರಿ ಹೇಳಿದ್ದೇನು ಗೊತ್ತಾ..?
ಶುಕ್ರವಾರ, 15 ಸೆಪ್ಟಂಬರ್ 2017 (12:48 IST)
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್`ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣ ಕುರಿತಂತೆ ಶಂಕೆ ಹಿನ್ನೆಲೆಯಲ್ಲಿ ನಿನ್ನೆ ತಾನೇ ಜೈಲಿನಿಂದ ಬಿಡುಗಡೆಯಾಗಿರುವ ಕುಣಿಗಲ್ ಗಿರಿಯನ್ನ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಇವತ್ತು ಎಸ್`ಐಟಿ ಕಚೇರಿಗೆ ಆಗಮಿಸಿದ ಗಿರಿ ಅಧಿಕಾರಿಗಳನ್ನ ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಕೊಲೆ ನಡೆದ ದಿನದ ಆಸುಪಾಸಿನಲ್ಲಿ ಕುಣಿಗಲ್ ಗಿರಿ ಸಹಚರರು ಓಡಾಡಿರುವ ಮಾಹಿತಿ ಹಿನ್ನೆಲೆಯಲ್ಲಿ ಎಸ್ಐಟಿ ಕುಣಿಗಲ್ ಗಿರಿ ವಿಚಾರಣೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನ ಸಿಐಡಿ ಆವರಣದಲ್ಲಿರುವ ಎಸ್ಐಟಿ ಕಚೇರಿಗೆ ಆಗಮಿಸಿದ್ದ ಕುಣಿಗಲ್ ಗಿರಿ ಮಾಧ್ಯಮಗಳ ಜೊತೆ ಮಾತನಾಡಿದರು. ಎಸೈಟಿ ಅಧಿಕಾರಿಗಳು ನನಗೆ ಯಾವುದೇ ಸಮನ್ಸ್ ನೀಡಿಲ್ಲ. ಮಾಧ್ಯಮಗಳಲ್ಲಿ ನನ್ನ ಹೆಸರು ಬಂದ ಹಿನ್ನೆಲೆಯಲ್ಲಿ ನನ್ನ ತಂದೆ ತಾಯಿ ಗಾಬರಿಗೊಂಡಿದ್ದರು. ಹೀಗಾಗಿ, ಎಸ್ಐಟಿ ಅಧಿಕಾರಿಗಳ ಭೇಟಿಗೆ ಬಂದಿದ್ದೇನೆ. ಆದರೆ, ಎಸ್ಐಟಿ ಅಧಿಕಾರಿಗಳ ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಪಸ್ ಆಗುತ್ತಿದ್ದೇನೆ. ನಾನು ಯಾವುದೇ ಕಾನೂನು ಉಲ್ಲಂಘನೆ ಕೆಲಸ ಮಾಡಿಲ್ಲ. ಹಲವು ವರ್ಷಗಳ ಬಳಿಕ ನನ್ನೂರಿಗೆ ತೆರಳುತ್ತಿದ್ದೇನೆ. ಕೃಷಿ ಕೆಲಸ ಮಾಡಿಕೊಂಡು ಬದುಕುತ್ತೇನೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಗೌರಿ ಹತ್ಯೆ ಬಗ್ಗೆ ಎಸ್`ಐಟಿ ಮಹತ್ವ ಮಾಹಿತಿಯೊಂದು ಸಿಕ್ಕಿದೆ ಎನ್ನಲಾಗುತ್ತಿದ್ದು, ಕೊಲೆಗೂ ಮುನ್ನ ಹಂತಕ ಮಧ್ಯಾಹ್ನ 3 ಗಂಟೆ, 7 ಗಂಟೆ ಮತ್ತು 8 ಗಂಟೆ ಸುಮಾರಿಗೆ ಗೌರಿ ಮನೆ ಬಳಿಗೆ ಬಂದು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಸಿಸಿಟಿವಿ ವಿಡಿಯೋಗಳಲ್ಲೂ ಹಂತಕನ ಚಹರೆ ಸಿಕ್ಕಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ