ಲೇಡಿ ಬಾಂಡ್ ಗೃಹಿಣಿ..!!!

ಶುಕ್ರವಾರ, 5 ಆಗಸ್ಟ್ 2022 (20:04 IST)
ಕಣ್ಣಿಗೆ ಖಾರದ ಪುಡಿ ಎಸೆದಿದ್ದರೂ ಪರಾರಿಯಾಗುತ್ತಿದ್ದ ಕಳ್ಳನನ್ನು ಆಕೆ ಬಿಡಲಿಲ್ಲ.. ಕದ್ದ ಚಿನ್ನದ ಸರ ಮರಳಿ ಪಡೆಯುವುದರ ಜತೆಗೆ ಕಳ್ಳನನ್ನು ಆ ಗೃಹಿಣಿ ಪೊಲೀಸರಿಗೊಪ್ಪಿಸಿದ್ದಾರೆ. ಮಹಿಳೆಯ ಧೈರ್ಯವನ್ನು ಮೆಚ್ಚಿದ ಸ್ಥಳೀಯರು ಹಾಗೂ ಪೊಲೀಸರಿಂದ ಶಭಾಷ್ ಸಿರಿಶಾ ಎಂಬ ಬಿರುದು ಕೊಟ್ಟಿದ್ದಾರೆ.
ಗೃಹಿಣಿಯ ಧೈರ್ಯ ಮೆಚ್ಚಲೇ ಬೇಕಾಗಿದೆ. ಕಣ್ಣಿಗೆ ಖಾರದ ಪುಡಿ ಎರಚಿ ಬಂಗಾರದ ತಾಳಿಯನ್ನು ಕದ್ದು ಹೋಗುತ್ತಿದ್ದ ಕಳ್ಳನನ್ನು ಗೃಹಿಣಿಯೊಬ್ಬಳು ಆತನ ಬೆಂಬಿಡದೇ ಹಿಡಿದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಈ ಘಟನೆ ಹೈದರಾಬಾದ್​ನ ಹೊರವಲಯದಲ್ಲಿರುವ ಹಯಾತ್‌​ ನಗರದಲ್ಲಿ ನಡೆದಿದೆ.
 
ಏನಿದು ಪ್ರಕರಣ: ಸೂರ್ಯಪೇಟೆ ಜಿಲ್ಲೆ ಮೋಟೆ ತಾಲೂಕಿನ ಅಪ್ಪಣ್ಣಗುಡೆಂ ಗ್ರಾಮದ ಸಂಡ್ರಾ ಸಿರಿಶಾ ಮತ್ತು ನಾಗೇಶ್ ಹಯತ್‌ನಗರದ ಬೊಮ್ಮಲಗುಡಿ ಸಮೀಪದ ಬಾಲಾಜಿನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆ ಭಿಕ್ಷಾಮಯ್ಯ ಎಂಬುವವರದು. ಮನೆಯ ಮೊದಲ ಮಹಡಿ ಸಿಂಗಲ್​ ಬಿಎಚ್​ಕೆಯಲ್ಲಿ ಇವರು ತಂಗಿದ್ದಾರೆ. ಇವರ ಅಕ್ಕಪಕ್ಕದಲ್ಲಿ ಇನ್ನೆರಡು ಸಿಂಗಲ್ ಬೆಡ್ ರೂಂ ಖಾಲಿ ಇದ್ದುದರಿಂದ ಮನೆಯ ಮಾಲೀಕರು ಫೋನ್ ನಂಬರ್ ಇರುವ ಟು ಲೆಟ್ ಬೋರ್ಡ್ ಹಾಕಿದ್ದರು. ಆದರೆ, ಇತ್ತೀಚೆಗೆ ಭಿಕ್ಷಮಯ್ಯ ದಂಪತಿ ಮಧ್ಯಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಮಗನ ಬಳಿ ಹೋಗಿದ್ದರು.
 
ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಮನೆಯ ಮೇಲಿನ ಮಹಡಿಗೆ ಬಂದು ಬಾಡಿಗೆಗೆ ಮನೆಗಳು ಬೇಕಾಗಿತ್ತು ಎಂದು ಸಿರಿಶಾ ಅವರನ್ನು ಕೇಳಿದಾರೆ. ಆಗ ಆಕೆ ಮಾಲೀಕರು ಇಲ್ಲ ಎಂದು ಉತ್ತರಿಸಿದ್ದರು. ನಾನು ಮಾಲೀಕರಿಗೆ ಕರೆ ಮಾಡಿದ್ದೇನೆ. ಅವರು ಮನೆ ತೋರಿಸಲು ಹೇಳಿದ್ದಾರೆ ಅಂತಾ ಹೇಳಿದ್ದಾನೆ. ಅದರಂತೆ ಸಿರಿಶಾ ಮೊದಲು ಒಂದು ಮನೆ ತೋರಿಸಿದ್ದಾರೆ. ಬಳಿಕ ಇನ್ನೊಂದು ಮನೆ ತೋರಿಸಿ ಬಾಗಿಲು ಹಾಕುತ್ತಿರುವಾಗ ಕಳ್ಳ ಸಿರಿಶಾ ಕಣ್ಣಿಗೆ ಖಾರದ ಪುಡಿ ಎರಚಿ ಆಕೆಯ ಕೊರಳಿನಲ್ಲಿದ್ದ 30 ಗ್ರಾಂ ಬಂಗಾರದ ತಾಳಿಯನ್ನು ಕಿತ್ತುಕೊಂಡು ಕೆಳಗೆ ಓಡಿ ಹೋಗಿದ್ದಾನೆ.
 
ಕಣ್ಣಲ್ಲಿ ಖಾರದ ಪುಡಿ ಬಿದ್ದಿದ್ರೂ ಸಹ ಸಿರಿಶಾ ಕಳ್ಳನನ್ನು ಬೆನ್ನಟ್ಟಿದ್ದಾರೆ. ಕಳ್ಳ ಕೆಳಗಿಳಿದು ಬೈಕ್​ನಲ್ಲಿ ಹೋಗುತ್ತಿದ್ದಾಗ ಸಿರಿಶಾ ವಾಹನವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಈ ವೇಳೆ ಕಳ್ಳ ಹತ್ತು ಮೀಟರ್​ವರೆಗೂ ಬೈಕ್​ನ್ನು ಓಡಿಸಿಕೊಂಡು ಹೋಗಿದ್ದಾನೆ. ಸಿರಿಶಾ ತನ್ನ ಕಾಲಿಗೆ ಪೆಟ್ಟು ಬಿದ್ದರೂ ಸಹ ಬೈಕ್​ನ್ನು ಗಟ್ಟಿಯಾಗಿಯೇ ಹಿಡಿದಿದ್ದರು. ಬಳಿಕ ಬೈಕ್​ ನಿಯಂತ್ರಣ ಕಳೆದುಕೊಂಡ ಕಳ್ಳ ಕೆಳಗೆ ಬಿದ್ದಿದ್ದಾನೆ. ಕೂಡಲೇ ಇಬ್ಬರು ಸ್ಥಳೀಯ ಯುವಕರ ಜತೆ ಸೇರಿ ಸಿರಿಶಾ ಕಳ್ಳನನ್ನು ಹಿಡಿದಿದ್ದಾರೆ. ಬೈಕ್ ಎಳೆದಿದ್ದರಿಂದ ಸಿರಿಶಾ ಅವರ ಮೊಣಕಾಲುಗಳಿಗೆ ಗಾಯವಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ