ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೌಕರಿ ಆಮಿಷವೊಡ್ಡಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ಹಣ ವಂಚಿಸಿದ ಸಂಬಂಧ ವಂಚನೆ ಒಳಗಾದವರು ದೂರು ದಾಖಲಿಸಲು ಮುಂದೆ ಬಾರದ ಕಾರಣ, ಪ್ರಕರಣ ದಾಖಲಾತಿಯಲ್ಲಿ ವಿಳಂಬವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಹೇಳಿದರು.
ಮುಖ್ಯ ಆರೋಪಿ ಮಂಜುನಾಥ ಮಲ್ಲಸರ್ಜ ಎಂಬಾತ 14 ಮಂದಿಯಿಂದ ₹30 ಲಕ್ಷಕ್ಕೂ ಅಧಿಕ ಹಣ ಪಡೆದಿರುವ ಬಗ್ಗೆ ದೂರು ಇದೆ.
ಈ ಸಂಬಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖೆಯಲ್ಲಿ ರಾಜ್ಯಪಾಲರ ಸಹಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಸಹಿ ಹಾಗೂ ಅವರ ಆಪ್ತಸಹಾಯಕರ ಸಹಿಯನ್ನೂ ನಕಲು ಮಾಡಿದ್ದಾನೆ. ಸಚಿವರ ಲೆಟರ್‌ಹೆಡ್‌ಗಳನ್ನು ಬಳಸಿದ್ದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.
ವಂಚನೆಗೊಳಗಾದ ಕಾವ್ಯಾ ಎಂಬುವವರು ಈ ಸಂಬಂಧ ಹೇಳಿಕೊಂಡಿದ್ದು, ಯಾವುದೇ ದೂರನ್ನು ನೀಡಿಲ್ಲ. ನಾಲ್ಕು ತಿಂಗಳ ಬಳಿಕ ಇನ್ನೊಬ್ಬ ಮಹಿಳೆ ಲಿಖಿತ ದೂರು ನೀಡಿದ್ದರಿಂದ ಈಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಆರೋಪಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದ್ದು, ಆತನನ್ನು ಬಂಧಿಸಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಒತ್ತಡದಿಂದ ಪೊಲೀಸರು ವಿಳಂಬ ಮಾಡಿಲ್ಲ ಎಂದರು.
ಸಾಮಾಜಿಕ ಕಾರ್ಯಕರ್ತರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆಪ್ತಸಹಾಯಕ ಸೋಮನಗೌಡ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ತನಿಖೆ ಹಂತದಲ್ಲಿದೆ. ಸದ್ಯಕ್ಕೆ ಸೋಮನಗೌಡ ಭಾಗಿಯಾದ ಆಧಾರಗಳು ಇಲ್ಲ. ಇದೆಲ್ಲವನ್ನೂ ತನಿಖೆ ಮಾಡುವಂತೆ ಸ್ವತಃ ಸಚಿವರೇ ಸೂಚಿಸಿದ್ದಾರೆ ಎಂದು ಹೇಳಿದರು.