ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಜೀವಾವಧಿ ಕಠಿಣ ಶಿಕ್ಷೆ, 1 ಲಕ್ಷ ದಂಡ
ಸೋಮವಾರ, 17 ಡಿಸೆಂಬರ್ 2018 (19:27 IST)
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿ ಕರೆದುಕೊಂಡು ಬಲವಂತವಾಗಿ ಲೈಂಗಿಕ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿನಿಂಗದಳ್ಳಿ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿ ಕರೆದುಕೊಂಡು ಬಲವಂತವಾಗಿ ಲೈಂಗಿಕ ಅತ್ಯಾಚಾರವೆಸಗಿದ ಇದೇ ಗ್ರಾಮದ ಆರೋಪಿ ಸೂರ್ಯಕಾಂತ ತಂದೆ ಸಾಯಬಣ್ಣ ದಂಡಿನ್ ಎಂಬಾತನನ್ನು ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಕಲಬುರಗಿ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಗೋಪಾಲಪ್ಪ ಎಸ್. ತೀರ್ಪು ನೀಡಿದ್ದಾರೆ.
23 ವಯಸ್ಸಿನ ಸೂರ್ಯಕಾಂತ ತಂದೆ ಸಾಯಬಣ್ಣ ದಂಡಿನ್ ಎಂಬಾತ 2016ರ ನವೆಂಬರ್ 2 ರಂದು ಹಾಗೂ 2017ರ ಜನವರಿ 15, 21 ಮತ್ತು 22ರಂದು ಅಪ್ರಾಪ್ತ ಬಾಲಕೀಯನ್ನು ಬಲವಂತವಾಗಿ ಲೈಂಗಿಕ ಅತ್ಯಾಚಾರವೆಸಗಿದ್ದು, ಈ ಕುರಿತು ಅಂದಿನ ಚಿಂಚೋಳಿ ಸಿ.ಪಿ.ಐ ಇಸ್ಮಾಯಿಲ್ ಶರೀಫ್ ಅವರು ತನಿಖೆ ನಡೆಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.
ಆರೋಪಿತ ಎಸಗಿರುವ ಅಪರಾಧವು ಸಾಕ್ಷ್ಯಾಧಾರಗಳಿಂದ ರುಜುವಾತಾಗಿರುವ ಹಿನ್ನೆಲೆಯಲ್ಲಿ ಐ.ಪಿ.ಸಿ. ಕಲಂ 376(2)(ಎನ್) ಹಾಗೂ ಪೋಕ್ಸೋ ಕಾಯ್ದೆ ಕಲಂ 6ರ ಅಡಿಯಲ್ಲಿನ ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.