ಮೀರಿ ನಿಲ್ಲಲಿ ಬದುಕು ಭ್ರಮೆಯ ಕಡಿವಾಣಗಳ ಮೀರಿ

ಮಂಗಳವಾರ, 8 ಮಾರ್ಚ್ 2022 (19:17 IST)
ನಮ್ಮ ಸುತ್ತಲೂ ಆರಾಮದ ಸುಖವೆಂದುಕೊಂಡ ಪಂಜರವೊಂದನ್ನು ನಾವೇ ಕಟ್ಟಿಕೊಂಡಿದ್ದೇವೆ. ಸಾಮಾಜಿಕ ತಾಣಗಳ ‘ಜಾಲ’ದೊಳಗೆ ಕಳೆದು ಹೋಗಿದ್ದೇವೆ. ಮೊಬೈಲ್‌ಗಳಿಗೆ ದೃಷ್ಟಿ ದಾನ ಮಾಡಿದವರು ನಮ್ಮ ಬದುಕಿನೆಡೆಗೆ ತಿರುಗಿ ನೋಡಲಾಗದಷ್ಟು ಕುರುಡಾಗಿದ್ದೇವೆ.ಮೌಸಮ್ ಗುಲಾಲ್ ಲೇಖೆ ದರ್‌ವಾಝೇ ಮೇರೇ ಆಯೇ;
ಮಿಸ್ರೀ ಸಿ ಬಾತ್ ಹವಾಯೀ ಕಾನೋ ಮೆ ಕೆಹ್ ಜಾಯೇ;
ಸಪ್ನ ದೇಖಾ ಹೇ ಮೈನೇ.. ಮೇನೇ ಭಿ ದೇಖಾ ಹೆ ಸಪ್ನ”
 
ಅದೇಕೋ ಈ ಹಾಡು ಮತ್ತೆ ಮತ್ತೆ ಕಾಡುತ್ತದೆ. ತನ್ನವರ ಕಳೆದುಕೊಂಡ ಅನಾಥ ಹುಡುಗಿಯೊಬ್ಬಳು ಒಂದು ಹಿಡಿ ಪ್ರೀತಿಗಾಗಿ, ಸುಂದರ ಭವಿಷ್ಯಕ್ಕಾಗಿ ಕನಸು ಕಾಣುತ್ತಾ ಹಾತೊರೆವ ಚಿತ್ರಣ ಈ ಹಾಡಲ್ಲಿ ಬಹಳ ಸುಂದರವಾಗಿ ಮೂಡಿ ಬಂದಿದೆ. ಮಹಿಳಾ ದಿನಾಚರಣೆ ಎಂದಾಗ ನನಗೆ ನೆನಪಾಗಿದ್ದು ಇದೇ ಹಾಡು. ಕೆಲವರಿಗೆ ಬದುಕು ಎಂಬುದು ದೊಡ್ಡ ಕನಸು. ಇನ್ನೂ ಕೆಲವರದು ಬದುಕೇ ಕನಸು. ನಮ್ಮೊಳಗೆ ಅದೆಷ್ಟೋ ಅಪ್ರಾಪ್ತ ಹೆಣ್ಣು ಮಕ್ಕಳು ಸೆರಗಲ್ಲಿ ಪುಟ್ಟ ಮಗುವನ್ನು ಕಟ್ಟಿಕೊಂಡು ಮಾರುವ ಆಟಿಕೆಯ ಜೊತೆಗೆ ಕನಸನ್ನೂ ಮಾರಿಕೊಂಡವರಿದ್ದಾರೆ. ಕೆಂಪು ದೀಪಗಳು ಬೆಳಗಿದಲ್ಲಿ ಕಾಣದಂತೆ ಕಣ್ಣೀರು ಒರೆಸಿಕೊಂಡು ಬದುಕು ಕತ್ತಲಾಗಿಸಿಕೊಂಡವರಿದ್ದಾರೆ. ಒಂದು ಹಿಡಿ ಗೌರವಕ್ಕಾಗಿ, ಗುರುತಿಗಾಗಿ ಹಾತೊರೆವ ಮಂಗಳೆಯರಿದ್ದಾರೆ. ಇವರೆಲ್ಲರಿಗೆ ಬದುಕೆಂಬುದು ಅತಿ ದೊಡ್ಡ ಕನಸು.
 
ಮಲ್ಟಿಪ್ಲೆಕ್ಸ್ ಸ್ಟುಡಿಯೋದಿಂದ ಹೊರಬಂದು ನೇರವಾಗಿ ಮಾಲ್‌ಗಳಲ್ಲಿರುವ ಹೊಸ ಟ್ರೆಂಡ್‌ನ ಬಟ್ಟೆ, ಶೂ ಖರೀದಿ ಮಾಡಿ, ಎಡೆ ಬಿಡದೆ ಕನ್ನಡಿ ನೋಡಿ, ಸೆಲ್ಫೀ ತೆಗೆದು, ಚೀಸ್ ಬರ್ಗರ್ ತಿಂದು ಜಿಮ್‌ಗೆ ಓಡುವ ನಮ್ಮದು ಬದುಕೇ ಕನಸು. ನಮಗೆ ಸಿನಿಮಾ ತಾರೆಯೊಬ್ಬಳು ಸ್ಪೂರ್ತಿಯಾದಷ್ಟು ಸರಳ ಸಜ್ಜನಿಕೆಯ ಮಹಿಳಾ ಉದ್ಯಮಿ ಸ್ಪೂರ್ತಿಯಾಗಲಿಲ್ಲ. ಟಿವಿಯಲ್ಲಿ ‘ಠೀವಿ’ಯಿಂದ ದುಡಿವ ಮಹಿಳೆಯ ಬಗೆಗೆ ಮಾತಾಡುವ ಯಾರೊಬ್ಬ ಮಹಿಳಾವಾದಿಯೂ, ಬೀದಿ ಬದಿಯ ಮರಕ್ಕೆ ಜೋಲಿಯನ್ನು ಕಟ್ಟಿ, ಆಗಾಗ್ಗೆ ಬಂದು ತೂಗುವ ಗಾರೆ ಕೆಲಸದ ಆ ಮಹಾತಾಯಿಯನ್ನು ತಿರುಗಿಯೂ ನೋಡಲಿಲ್ಲ. ನಾವು ತಿರುಗಿಯೂ ನೋಡದ, ಮಾತಾಡಲೂ ಇಷ್ಟ ಪಡದ ಆ ಬದುಕು ನಮಗೆ ಆದರ್ಶವಾಗಲೆ ಇಲ್ಲ.
 
ನಮ್ಮ ಸುತ್ತಲೂ ಆರಾಮದ ಸುಖವೆಂದುಕೊಂಡ ಪಂಜರವೊಂದನ್ನು ನಾವೇ ಕಟ್ಟಿಕೊಂಡಿದ್ದೇವೆ. ಸಾಮಾಜಿಕ ತಾಣಗಳ ‘ಜಾಲ’ದೊಳಗೆ ಕಳೆದು ಹೋಗಿದ್ದೇವೆ. ಮೊಬೈಲ್‌ಗಳಿಗೆ ದೃಷ್ಟಿ ದಾನ ಮಾಡಿದವರು ನಮ್ಮ ಬದುಕಿನೆಡೆಗೆ ತಿರುಗಿ ನೋಡಲಾಗದಷ್ಟು ಕುರುಡಾಗಿದ್ದೇವೆ. ಆದರ್ಶಗಳು ಲೈಕ್ ಶೇರ್‌ಗಳಿಗೆ ಸೀಮಿತವಾಗಿವೆ. ಸಮಾಜವನ್ನು ಪುರುಷಪ್ರಧಾನವೆಂದು ದೂರುತ್ತಾ, ಕನಸು ಮಾರಿಕೊಂಡೆವೆಂದು ಅಳುತ್ತಾ, ಸಬಲರಾಗಬೇಕೆಂದು ಚೀರಾಡುತ್ತಾ, ಸಾಧಿಸಿದವರ ನೋಡಿ ಮರುಗುತ್ತಾ ಇದ್ದಲ್ಲೇ ಇದ್ದು, ಮಣ್ಣಾಗುತ್ತಿದ್ದೇವೆ. ಕನಸೊಳಗೆ ಕನಸಿನಂತೆ ಮರೆಯಾಗುತ್ತಿದ್ದೇವೆ. ಇದನ್ನೆಲ್ಲಾ ನೋಡುವಾಗ ಮಾನಸಿಕ ಶಾಸ್ತçದಲ್ಲಿ ಬರುವ “ಪಂಜರದ ಫಲ” ಕಥೆಯ ನೆನಪಾಗುತ್ತದೆ. ಒಬ್ಬ ಸ್ನೇಹಿತ ತನ್ನ ಮಿತ್ರನಿಗೆ ಬಹಳಷ್ಟು ಸಲ ಹಕ್ಕಿ ಸಾಕಲು ಸಲಹೆ ನೀಡುತ್ತಾನೆ. ಪ್ರತೀ ಸಲ ನಿರಾಕರಿಸಿದ ಸ್ನೇಹಿತನಿಗೆ ನೀನು ಹಕ್ಕಿ ಸಾಕುವಂತೆ ಮಾಡಿಯೇ ತೀರುತ್ತೇನೆ ಎಂದು ಪಣ ತೊಡುತ್ತಾನೆ. ಅಂತೆಯೇ ಮಿತ್ರನ ಹುಟ್ಟು ಹಬ್ಬದಂದು ಹಕ್ಕಿ ಪಂಜರವೊಂದನ್ನು ಉಡುಗೊರೆಯಾಗಿ ನೀಡುತ್ತಾನೆ.
 
ಎಂದಿಗೂ ಹಕ್ಕಿ ಸಾಕಲಾರೆ ಎಂದು ಹೇಳಿ ನಗುತ್ತಲೇ ಪಡೆದುಕೊಂಡ ಸ್ನೇಹಿತ ಆ ಸುಂದರವಾದ ಪಂಜರವನ್ನು ಮನೆಯೆದುರಲ್ಲಿ ಅಲಂಕಾರಿಕವಾಗಿ ಇಡುತ್ತಾನೆ. ಬಹಳಷ್ಟು ದಿನ ಖಾಲಿಯಿದ್ದ ಹಕ್ಕಿ ಪಂಜರವನ್ನು ಕಂಡು ಮನೆಗೆ ಬರುತ್ತಿದ್ದ ಸ್ನೇಹಿತರೆಲ್ಲಾ ಹಕ್ಕಿಯೇನು ಸತ್ತಿದೆಯೇ? ಏನಾಯಿತು? ಖಾಲಿಯೇಕಿದೆ ಪಂಜರ? ಎಂದು ಪ್ರಶ್ನೆ ಕೇಳುತ್ತಿದ್ದರೆ ಸ್ನೇಹಿತ ತಾನು ಹಕ್ಕಿ ಎಂದೂ ಸಾಕಿಲ್ಲವೆಂದು, ತನ್ನ ಸ್ನೇಹಿತ ಉಡುಗೊರೆಯಾಗಿ ನೀಡಿದನೆಂದೂ, ಸುಂದರವಾಗಿದ್ದುದರಿಂದ ಮನೆಯೆದುರು ಇಟ್ಟೆನೆಂದು ಹೇಳುತ್ತಿರುತ್ತಾನೆ. ಕೆಲವರು ನಂಬಿದರೆ, ಕೆಲವರು ಸುಳ್ಳು ಹೇಳುತ್ತಿರುವನೇನೋ ಎಂಬಂತೆ ಆತನನ್ನು ನೋಡುತ್ತಿದ್ದರು. ಕೊನೆಗೆ ಬಂದವರಿಗೆಲ್ಲಾ ಉತ್ತರಿಸಿ ಸೋತ ಸ್ನೇಹಿತ ಖಾಲಿಯಿದ್ದ ಪಂಜರಕ್ಕೆ ಸೂಕ್ತ ಹಕ್ಕಿ ಹುಡುಕಿ ತರುತ್ತಾನೆ. ತಾತ್ಪರ್ಯ ಇಷ್ಟೆ. ನಾವೆಷ್ಟೋ ಸಲ ನಮ್ಮ ಸುತ್ತ ಪಂಜರವೊಂದನ್ನು ಕಟ್ಟಿಕೊಳ್ಳುತ್ತೇವೆ. ನಂತರ ನಮಗೆ ಸೂಕ್ತವೆನಿಸಿದ್ದನ್ನು ತುಂಬಿಕೊಳ್ಳುತ್ತೇವೆ. ತಪ್ಪೋ ಸರಿಯೋ ಅಲ್ಲಿ ವಿವೇಚಿಸುವ ಪರಿವೆ ನಮ್ಮಲ್ಲಿ ಇರುವುದಿಲ್ಲ. ಅದನ್ನು ನಿರ್ದರಿಸುವುದು ನಮ್ಮ ಸುತ್ತಲಿನ ವಾತಾವರಣ. ಆ ವಾತಾವರಣ ಎಂತಹುದು ಎಂಬುದನ್ನು ಅರಿಯುವುದು ಅತ್ಯವಶ್ಯ.
 
ಹಿಂದೊಂದು ಕಾಲವಿತ್ತು ಮಹಿಳೆಯರಿಗೆ ಸುತ್ತಲೂ ಸರಪಳಿಗಳು. ಆದರೆ ಈಗ ಸಮಾಜ ಬದಲಾಗಿದೆ. ಇಲ್ಲಿ ಯಾರು ಯಾರನ್ನೂ ಕಟ್ಟಿ ಹಾಕಿಲ್ಲ. ಎಲ್ಲರೂ ಮುಕ್ತರೆ. ಭಯ ಅಂಜಿಕೆಯ ಸರಪಳಿಯನ್ನು ಸುತ್ತಿಕೊಂಡಿರುವುದು ನಾವೇ. ಯಾವುದೋ ಅಸಮಾನತೆಯ ಅಸಮಧಾನವನ್ನು ಹೊರಗೆಡವುತ್ತಾ, ಸ್ವಯಂ ಕರುಣೆಗೆ ಪಾತ್ರರಾಗಿ ನೊಂದು ಬೆಂದು ಪಂಜರದೊಳಗೆ ಅವಶೇಷವಾಗುವುದ ಬಿಟ್ಟು ಸಾಧನೆಯ ಕನಸು ಕಾಣಬೇಕಿದೆ. ನನಸಾಗಿಸುವತ್ತ ಚಲಿಸಬೇಕು. ಸೌಂದರ್ಯಮಾನದಂಡದ ಅರಿವಿಗಿಂತ ವ್ಯಕ್ತಿತ್ವದೆಡೆಗಿನ ಒಲವು ಮೂಡಬೇಕಿದೆ. ಇಲ್ಲಿ ವಾದಿಸುವವರಿಗಿಂತ ಸಾಧಿಸುವವರು ಮಾದರಿಯಾಗಬೇಕಾಗಿದೆ. ಮಹಿಳೆಯರು ಒಬ್ಬರಿಗೊಬ್ಬರು ಆದರ್ಶವಾಗಬೇಕಾಗಿದೆ. ಒಂದು ವ್ಯವಸ್ಥೆಯನ್ನು ದೂರುವ ಬದಲು ನಮ್ಮದೇ ಸುಂದರ ವ್ಯವಸ್ಥೆಯನ್ನು ಕಟ್ಟಿಕೊಳ್ಳೋಣ. ಬದಲಾಗಬೇಕಿದೆ ನಾವು. ಬನ್ನಿ, ಸದ್ದು ಮಾಡದೆ ಸದ್ದಾಗೋಣ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ