ಪ್ರೀತಿಯಿಂದ ಗೆಲ್ಲಬೇಕು, ಭೀತಿಯಿಂದಲ್ಲ: ಗೋಕಥಾದಲ್ಲಿ ಶ್ರೀಶ್ರೀರಾಘವೇಶ್ವರ ಭಾರತೀ

ಶುಕ್ರವಾರ, 26 ಆಗಸ್ಟ್ 2016 (14:38 IST)
ದೇವರು ಕಾಣುವುದಿಲ್ಲಾ ಎಂದು ಹೇಳುತ್ತೇವೆ, ಕಾಣುವ ಎಲ್ಲಚೇತನಗಳಲ್ಲಿ, ವಸ್ತುಗಳಲ್ಲಿ ದೇವರನ್ನು ಕಾಣುವುದು ಭಾರತೀಯ ಸಂಸ್ಕೃತಿ. ಆದರೆ ಇಂದು ಪರಿಸರದ ಬಗ್ಗೆ, ಗೋವಿನಂತಹ ಸೃಷ್ಟಿಯ ಅದ್ಭುತಗಳ ಬಗ್ಗೆ ಪೂಜ್ಯ ಭಾವನೆ ನಷ್ಟವಾಗುತ್ತಿರುವುದೇ ಅನರ್ಥಕ್ಕೆ ಕಾರಣವಾಗಿದ್ದು, ಪರಿಸರ ನಾಶ, ಗೋವಿನ ವಿನಾಶಕ್ಕೆ ಕಾರಣವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನುಡಿದರು.
ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ ಗೋಕಥಾದಲ್ಲಿ ಕೃಷ್ಣಾಷ್ಟಮಿ ಪ್ರಯುಕ್ತ ಗೋವರ್ಧನಗಿರಿಧಾರಿ ಶ್ರೀಕೃಷ್ಣನ ಕಥೆಯನ್ನು ನಿರೂಪಿಸಿದ ಶ್ರೀಗಳು, ಇಂದ್ರ ಗೋಪಾಲಕರನ್ನು ಬೆದರಿಸಿ ಪೂಜೆ ಮಾಡಿಸಿಕೊಳ್ಳುತ್ತಿದ್ದ, ಆದರೆ ಪ್ರೀತಿಯಿಂದ ಗೆಲ್ಲಬೇಕು ಹೊರತು ಭೀತಿಯಿಂದಲ್ಲ. ಭೀತಿಯಿಂದ ಬಹಿರಂಗವನ್ನು ಗೆಲ್ಲಬಹುದು  ಹೊರತು ಅಂತರಂಗವನ್ನು ಗೆಲ್ಲಲಾಗದು ಎಂದು ಹೇಳಿದರು. 
ಅಂದು ತನಗೆ ಪೂಜೆ ಸಲ್ಲಲಿಲ್ಲ ಎಂದು ಮೂರು ಲೋಕದ ದೊರೆ ಗೋವುಗಳನ್ನು ಪೀಡಿಸಿದ. ಆದರೆ ಶ್ರೀಕೃಷ್ಣ ಗೋವುಗಳನ್ನು ಗೋಪಾಲಕರನ್ನು ಸಂರಕ್ಷಿಸಿದ. ಇಂದು ಗೋವು – ಗೋಪ್ರೇಮಿಗಳು ತೊಂದರೆಯಲ್ಲಿದ್ದಾರೆ.  ಆದರೆ ದೇವರನ್ನು ನಂಬಿದವರಿಗೆ ದೊರೆಗಳು ಏನೂ ಮಾಡಲಾಗದು. ಅದಕ್ಕೆ ಗೋವೂ ಮತ್ತು ನಾವೇ ಉದಾಹರಣೆ ಎಂದು ಮಾರ್ಮಿಕವಾಗಿ ಹೇಳಿದರು.
 
ಪ್ರವಚನ, ಕಥನ, ಗಾಯನ, ರೂಪಕಗಳನ್ನೊಳಗೊಂಡ ಈ ಗೋಕಥೆಯಲ್ಲಿ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳಿ ಗಣಪತಿ ಅವರು ಮನಮೋಹಕವಾಗಿ ಚಿತ್ರಿಸಿದರು. ಡಾ| ಗಜಾನನ ಶರ್ಮ ಅವರ ಸಾಹಿತ್ಯ ಸಹಕಾರ, ಗಾಯನದಲ್ಲಿ ಹಿರಿಯ ಗಾಯಕರಾದ ಗರ್ತಿಕೆರೆ ರಾಘಣ್ಣ, ಶ್ರೀಪಾದ ಭಟ್, ದೀಪಿಕಾ ಭಟ್, ಕೊರಿಕ್ಕಾರ್ ಸಹೋದರಿಯರು ಹಾಗೂ ಸಂಗೀತ ವಾದ್ಯಗಳಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಗಣೇಶ್ ಕೆ.ಎಸ್ ಮೊದಲಾದವರು ಭಾಗವಹಿಸಿದ್ದರು. ಅನಂತರ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ಮೂಡಿಬಂದ ರೂಪಕ ಜನರ ಮನತಟ್ಟಿತು.  ಸಾವಿರಾರು ಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
 
ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆ ನಡೆಯಿತು. ಆನಂತರದಲ್ಲಿ ಕೃಷ್ಣಜನ್ಮೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ನಡೆದವು, ಶ್ರೀಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿ ತೂಗಿ ಜನ್ಮೋತ್ಸವವನ್ನು ಆಚರಿಸಲಾಯಿತು. 
        
ಗೋಕಥಾ ಪ್ರಾಯೋಜಕರಾದ ಬಿವಿಜಿ ಗ್ರೂಪಿನ ಮಾಲಿಕರಾದ ಪ್ರಸನ್ನ ಶಾಸ್ತ್ರಿ ಕುಟುಂಬದವರು, ಶ್ರೀಮಠದ ಪದಾಧಿಕಾರಿಗಳು, ಅನೇಕ ಗಣ್ಯರು, ಹಾಗೂ ಅಪಾರ ಸಂಖ್ಯೆಯ ಭಕ್ತಸ್ತೋಮ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
 
ದೇವರನ್ನು ನಂಬಿದವರಿಗೆ ದೊರೆಗಳು ಏನೂ ಮಾಡಲಾಗದು. ಅದಕ್ಕೆ ಗೋವೂ ಮತ್ತು ನಾವೇ ಉದಾಹರಣೆ .
ಪ್ರೀತಿಯಿಂದ ಗೆಲ್ಲಬೇಕು ಹೊರತು ಭೀತಿಯಿಂದಲ್ಲ. ಭೀತಿಯಿಂದ ಬಹಿರಂಗವನ್ನು ಗೆಲ್ಲಬಹುದು  ಹೊರತು ಅಂತರಂಗವನ್ನು             ಗೆಲ್ಲಲಾಗದು 
ಶ್ರೀಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿ ತೂಗಿ ಜನ್ಮೋತ್ಸವವನ್ನು ಆಚರಿಸಲಾಯಿತು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ