ಇದು ಅಂಬುಲೆನ್ಸ್‌ ಕಲ್ಯಾಣ ಕಥೆ

ಸೋಮವಾರ, 6 ಜೂನ್ 2016 (11:11 IST)
ಮದುವೆ ಪ್ರತಿಯೊಬ್ಬರ ಜೀವನದ ಮಹತ್ವದ ದಿನ. ಮದುವೆ ಕಲ್ಯಾಣ ಮಂಟಪದಲ್ಲೋ, ದೇವಸ್ಥಾನದಲ್ಲಿ, ವಿವಾಹ ನೋಂದಣಿ ಕಚೇರಿಯಲ್ಲೋ ನಡೆಯತ್ತೆ. ಆದರೆ ಚಿತ್ರದುರ್ಗದ ಪ್ರೇಮಿಗಳಿಬ್ಬರು ಅಂಬುಲೆನ್ಸ್‌ನಲ್ಲಿ ವಿವಾಹವಾಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಅವರು ಅಂಬುಲೆನ್ಸ್‌ನಲ್ಲಿ ಮದುವೆಯಾಗಿದ್ದು ಏಕೆ? ತಿಳಿಯಲು ಮುಂದೆ ಓದಿ. 

ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆಯ ನೇತ್ರಾವತಿ ಹಾಗೂ ಚಳ್ಳಕೆರೆಯ ಗುರುಸ್ವಾಮಿ ನಡುವೆ ಒಂದು ವರ್ಷದಿಂದ ಪ್ರೀತಿ ಪ್ರೇಮ ನಡೆಯುತ್ತಿತ್ತು. ಇಬ್ಬರು ಮೇ 22ರಂದು ಏಳು ಸುತ್ತಿನ ಕೋಟೆ ಕೋಟೆ ವೀಕ್ಷಣೆಗೆ ತೆರಳಿದ್ದರು. ದುರದೃಷ್ಟವಶಾತ್ ನೇತ್ರಾವತಿ ಕಾಲು ಜಾರಿ 30 ಅಡಿ ಆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. 
 
ಘಟನೆ ನಡೆದಾಗಿನಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತನ್ನ ಪ್ರಿಯತಮೆ ಸ್ಥಿತಿಯಿಂದ ನೊಂದಿದ್ದ ಗುರುಸ್ವಾಮಿ ಶನಿವಾರ ಆಸ್ಪತ್ರೆಯಲ್ಲಿಯೇ ಆಕೆಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ ಹಿರಿಯರು ಮುರುಘಾ ಮಠದಲ್ಲಿ ಮದುವೆ ಮಾಡುವುದೆಂದು ನಿಶ್ಚಯಿಸಿದರು, ನಿನ್ನೆ ಅವರ ಮದುವೆಗೆ ಮಹೂರ್ತವನ್ನು ನಿಗದಿ ಪಡಿಸಲಾಯ್ತು. 
 
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೇತ್ರಾವತಿಯನ್ನು ಅಂಬುಲೆನ್ಸ್‌ನಲ್ಲಿ ಮುರುಘಾ ಮಠಕ್ಕೆ ಕರೆತಂದು ವಿವಾಹ ನಡೆಸಲಾಯಿತು. ಆಂಬುಲೆನ್ಸ್‌ನಲ್ಲಿ ಮಲಗಿದ್ದ ನೇತ್ರಾವತಿ ಕೊರಳಿಗೆ ಮೂರು ಗಂಟು ಹಾಕಿದ ಗುರುಸ್ವಾಮಿ ಆಕೆಯನ್ನು ಪತ್ನಿಯಾಗಿ ಸ್ವೀಕರಿಸಿದರು. ಈ ಮೂಲಕ ನೋವಿನಿಂದ ನರಳುತ್ತಿದ್ದ ತನ್ನ ಪ್ರೇಮಿಗೆ ಸಾಂತ್ವನ ನೀಡಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ