ಇರಾನ್: ಇಸ್ರೇಲ್, ಅಮೆರಿಕಾ ತನ್ನ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಈಗ ಇರಾನ್ ಅಳಿವಿನ ಅಪಾಯದಲ್ಲಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ 2004 ರಲ್ಲಿ ಇರಾನ್ ನಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಗಲ್ಲಿಗೇರಿಸಿದ ಪ್ರಕರಣ ಭಾರೀ ಸದ್ದು ಮಾಡುತ್ತಿದೆ.
2004 ರಲ್ಲಿ ಅತೀಫ್ ರಜಬಿ ಸಹಾಲೆ ಎಂಬ 13 ವರ್ಷದ ಅಪ್ರಾಪ್ತ ಬಾಲಕಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿತ್ತು. ಅದೂ ಸಂತ್ರಸ್ತೆಯಾಗಿ ರಕ್ಷಣೆಗೊಳಪಡಬೇಕಿದ್ದ ಆಕೆಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ ಅಮಾನುಷವಾಗಿ ನಡೆದುಕೊಳ್ಳಲಾಗಿತ್ತು. ಈಗ ಇರಾನ್ ಪತನದ ಅಂಚಿನಲ್ಲಿರುವಾಗ ಆ ಘಟನೆ ಮುನ್ನಲೆಗೆ ಬಂದಿದೆ.
ಇದು ನಡೆದಿದ್ದು 2004 ರಲ್ಲಿ. ಅತೀಫ್ ಚಿಕ್ಕವಯಸ್ಸಿನಲ್ಲಿದ್ದಾಗಲೇ ಪೋಷಕರು ಪರಸ್ಪರ ಬೇರೆಯಾದರು. ಬಳಿಕ ತಾಯಿ ಇನ್ನೊಂದು ಮದುವೆಯಾಗಿದ್ದರು. ಆದರೆ ದುರದೃಷ್ಟವಶಾತ್ ಅತೀಫ್ ತಾಯಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಸಹೋದರ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ. ತಂದೆ ಮಾದಕ ದ್ರವ್ಯ ವ್ಯಸನಿಯಾಗುತ್ತಾನೆ. ಹೀಗಾಗಿ ಆಕೆ ತಾತ-ಅಜ್ಜಿಯ ಆಶ್ರಯಕ್ಕೆ ಬೀಳುತ್ತಾಳೆ. ಆದರೆ ಅವರು ಆಕೆಯ ಬಗ್ಗೆ ಹೆಚ್ಚು ಗಮನ ಕೊಡುವುದೇ ಇಲ್ಲ.
13 ವರ್ಷದ ಅತೀಫ್ ಒಂದು ದಿನ ಪೊಲೀಸರು ರೈಡ್ ಮಾಡುವಾಗ ಒಬ್ಬ ಹುಡುಗನೊಂದಿಗೆ ಕಾರಿನಲ್ಲಿ ಏಕಾಂಗಿಯಾಗಿ ಸಿಕ್ಕಿಬೀಳುತ್ತಾಳೆ. ಹೀಗಾಗಿ ಆಕೆಗೆ ಜೈಲು ಶಿಕ್ಷೆಯ ಜೊತೆಗೆ 100 ಚಾಟಿಯೇಟಿನ ಶಿಕ್ಷೆ ಸಿಗುತ್ತದೆ. ಜೈಲಿನಲ್ಲೂ ಆಕೆಯ ಮೇಲೆ ನಿರಂತರ ಅತ್ಯಾಚಾರವಾಗುತ್ತದೆ. 2003 ರಲ್ಲಿ ಅತೀಫ್ ಳನ್ನು ವ್ಯಭಿಚಾರ ಆರೋಪದಲ್ಲಿ ಮತ್ತೆ ಬಂಧಿಸಲಾಗುತ್ತದೆ. ಈ ಪ್ರಕರಣದ ತನಿಖೆಯನ್ನು ನಡೆಸಿದ ನ್ಯಾಯಾಧೀಶರ ಮುಂದೆ ಆಕೆ ತಪ್ಪು ಮಾಡಿದವಳು ನಾನಲ್ಲ. ನಾನು ಸಂತ್ರಸ್ತೆ. ನನ್ನ ಮೇಲೆ 51 ವರ್ಷದ ಅಲಿ ದರಾಬಿ ಎಂಬ ರೆವಲ್ಯೂಷನರಿ ಗಾರ್ಡ್ ನಿರಂತರ ಅತ್ಯಾಚಾರವೆಸಗಿದ್ದಾನೆ. ಹೀಗಾಗಿ ನನಗೆ ನ್ಯಾಯ ಬೇಕು ಎಂದು ಕೇಳುತ್ತಾಳೆ. ಆದರೆ ಆಕೆಯ ಮಾತಿಗೆ ಬೆಲೆ ಕೊಡದೇ ಕೋರ್ಟ್ ಆಕೆಗೆ ಜೀವಾವಧಿ ಶಿಕ್ಷೆ ವಿಧಿಸುತ್ತದೆ. ಇದರಿಂದ ಸಿಟ್ಟಿಗೆದ್ದ ಆಕೆ ಕೋರ್ಟ್ ಹಾಲ್ ನಲ್ಲೇ ಹಿಜಾಬ್ ತೆಗೆದು ಆಕ್ರೋಶ ಹೊರಹಾಕುತ್ತಾಳೆ. ನ್ಯಾಯಾಧೀಶರ ಮೇಲೆ ಚಪ್ಪಲಿ ಬಿಸಾಕುತ್ತಾಳೆ. ಆಕೆಯ ಈ ಕೃತ್ಯವನ್ನು ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಎಂದು ಪರಿಗಣಿಸಿ ನ್ಯಾಯಾಧೀಶರು ಆಕೆಗೆ ಗಲ್ಲು ಶಿಕ್ಷೆಗೆ ಆದೇಶ ನೀಡುತ್ತಾರೆ. ಇದನ್ನು ಪ್ರಶ್ನಿಸಿ ಆಕೆಯ ಪರ ಲಾಯರ್ ಇರಾನ್ ಸುಪ್ರೀಂಕೋರ್ಟ್ ಗೆ ಹೋದರೂ ಅಲ್ಲೂ ಕೆಳ ಹಂತದ ತೀರ್ಪನ್ನೇ ಎತ್ತಿ ಹಿಡಿಯಲಾಗುತ್ತದೆ.
ಪರಿಣಾಮ 2004 ಆಗಸ್ಟ್ 15 ರಂದು ಆಕೆಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗುತ್ತದೆ. ಆಕೆಯ ವಯಸ್ಸು ಕೇವಲ 13. ಇರಾನ್ ಕಾನೂನಿನ ಪ್ರಕಾರ ಅಪ್ರಾಪ್ತರನ್ನು ಈ ರೀತಿ ಗಲ್ಲಿಗೇರಿಸುವಂತಿಲ್ಲ. ಆದರೆ ನ್ಯಾಯಾಧೀಶರು ಆಕೆಯ ದೇಹ ಗಾತ್ರ ಗಮನಿಸಿ ತಾವೇ ಆಕೆಯ ವಯಸ್ಸು 22 ವರ್ಷ ಎಂದು ತಿದ್ದುಪಡಿ ಮಾಡಿ ಗಲ್ಲಿಗೇರಿಸುತ್ತಾರೆ.
ಅಂದಿನ ಈ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಹುಶಃ ಆಕೆಯ ಶಾಪವೇ ಇರಾನ್ ಗೆ ಈ ಗತಿ ತಂದುಬಿಟ್ಟಿದೆಯೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.