ಮಹದಾಯಿ ಸಭೆ ಮುಂದಕ್ಕೆ: ರಾಜಕೀಯ ಹುನ್ನಾರ?

ಗುರುವಾರ, 20 ಅಕ್ಟೋಬರ್ 2016 (10:52 IST)

ಬೆಂಗಳೂರು: ಇನ್ನೇನು ಮಹಾದಾಯಿ ಸಮಸ್ಯೆಗೆ ತಾರ್ಕಿಕ ಪರಿಹಾರ ದೊರೆಯಲಿದೆ ಎಂದು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಉತ್ತರ ಕರ್ನಾಟಕ ಭಾಗದ ಜನತೆಗೆ ನಿರಾಸೆಯ ಕಾರ್ಮೋಡ ಕವಿದಿದೆ.

 


 

ಹೌದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಗೋವಾ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಸಭೆಯನ್ನು ದಿ. 21ರಂದು ಮಹಾರಾಷ್ಟ್ರದಲ್ಲಿ ನಿಗದಿ ಪಡಿಸಲಾಗಿತ್ತು. ಸಂಬಂಧಿಸಿ ರಾಜ್ಯ ಸರಕಾರ ಕಾನೂನು ಹಾಗೂ ಜಲ ತಜ್ಞರಿಂದ ಅಗತ್ಯ ಮಾಹಿತಿ ಪಡೆದು, ನಿನ್ನೆಯಷ್ಟೇ ಸರ್ವಪಕ್ಷ ಸಭೆ ಕರೆದು ಯಾವೆಲ್ಲ ವಾದ ಮಂಡಿಸಬೇಕು ಎಂದು ಚರ್ಚಿಸಿತ್ತು. ಅದಾದ ಕೆಲವೇ ಸಮಯದಲ್ಲಿ ಗೋವಾ ಸರಕಾರ ಸಭೆ ಮುಂದೂಡುವಂತೆ ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿಯವರಲ್ಲಿ ವಿನಂತಿಸಿಕೊಂಡಿದೆ. ಇನ್ನೇನು ಪರಿಹಾರ ಸಿಕ್ಕೇ ಬಿಟ್ಟಿತು ಎನ್ನುವ ನಿರೀಕ್ಷೆಯ ನೊಗ ಹೊತ್ತುಕೊಂಡಿದ್ದ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭಾರಿ ನಿರಾಸೆಯಾಗಿದೆ.

 

ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ದಿಢೀರ ಮುಂದೂಡಿದನ್ನು ಸಹಿಸಲಾಗದ ಹುಬ್ಬಳ್ಳಿ, ಧಾರವಾಡ, ಗದಗ, ನವಲಗುಂದ, ನರಗುಂದ ಭಾಗದ ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತ ಯೋಜನೆ ಅನುಷ್ಠಾನಕ್ಕೆ ತಡೆಯೊಡ್ಡುತ್ತಿದೆ. ಕುಡಿಯುವ ನೀರಿನ ಕುರಿತು ಗೋವಾ ಸರಕಾರ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರತಿಭಟನೆಯ ಕಾವು ಹೆಚ್ಚುತ್ತಿದೆ.

 

ಗೋವಾ ಮುಖ್ಯಮಂತ್ರಿ ಅನಾರೋಗ್ಯದ ಕಾರಣದಿಂದ ಸಭೆಗೆ ಹಾಜರಾಗಲು  ಆಗುತ್ತಿಲ್ಲ ಎನ್ನುವ ಮಾತು ಸತ್ಯಕ್ಕೆ ದೂರವಾದದ್ದು ಎನ್ನುವುದು ರೈತರ ಆರೋಪ. ಸಭೆ ಇರುವುದು ದಿ. 21 ರಂದು. ಅಲ್ಲಿಯ ಮುಖ್ಯಮಂತ್ರಿಗಳಿಗೆ, ಅಂದು ಅನಾರೋಗ್ಯ ಹದಗೆಡುತ್ತದೆ ಎಂದು ಈಗಲೇ ಹೇಗೆ ಗೊತ್ತಾಗಿದೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಮೂರು ದಿನಗಳ ಹಿಂದೆ ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಹದಾಯಿ ವಿಷಯದ ಕುರಿತು ಪ್ರಧಾನಿ ಮಧ್ಯ ಪ್ರವೇಶಿಸಬೇಕು ಎಂದು ಹೇಳಿಕೆ ನೀಡಿದ್ದು ಕೆಲಸ ಮಾಡುತ್ತಿದೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ.

 

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಈ ಯೋಜನೆಯ ಲಾಭ ಪಡೆದುಕೊಳ್ಳಲು ಒಂದಿಲ್ಲೊಂದು ನಾಟಕವಾಡುತ್ತಿದೆ. ಯಾವೊಬ್ಬ ಜನಪ್ರತಿನಿಧಿಗೂ ಈ ಯೋಜನೆ ಅನುಷ್ಠಾನಕ್ಕೆ ಬರುವುದು ಬೇಡವಾಗಿದೆ. ಯೋಜನೆಯ ಹೆಸರು ಹೇಳುತ್ತಲೇ ಮತ ಪಡೆಯುವ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪ ಉತ್ತರ ಕರ್ನಾಟಕ ಭಾಗದ ಜನರಲ್ಲಿ ಸಾಮಾನ್ಯವಾಗಿದೆ. ಒಟ್ಟಾರೆ, ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮುಂದೂಡಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಹೋರಾಟಕ್ಕೆ ಹಾಗೂ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ 

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ