ಇಂದಿನ ಪರಿಸ್ಥಿತಿಯಲ್ಲಿ ಸಹಕಾರ ಕ್ಷೇತ್ರದ ಜಾಗೃತಿ ಅವಶ್ಯ ಎಂದ ಮಹಾಜನ್
ಗುರುವಾರ, 15 ನವೆಂಬರ್ 2018 (17:53 IST)
ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಹಕಾರ ಕ್ಷೇತ್ರದ ಕುರಿತು ಜಾಗೃತಿ ಹಮ್ಮಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸಂಯುಕ್ತ ಸಹಕಾರಿಯ ನಿರ್ದೇಶಕ ಸಂಜೀವ ಮಹಾಜನ್ ಅಭಿಪ್ರಾಯಪಟ್ಟರು.
ಕಲಬುರಗಿ ನಗರದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಕಛೇರಿಯಲ್ಲಿ 65 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇಂದಿನ ಅಧುನಿಕ ಯುಗದಲ್ಲಿ ಹಣಕಾಸು ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತ ಹಲವಾರು ಬದಲಾವಣೆ ಹೊಂದುವುದರ ಮುಖಾಂತರ ತ್ವರಿತ ಗತಿಯಲ್ಲಿ ಇಂದು ಸೇವೆ ನೀಡುತ್ತಿವೆ. ಅದೇ ರೀತಿಯಾಗಿ ಸಹಕಾರ ಕ್ಷೇತ್ರವು ಸಹ ನಮ್ಮ ಸದಸ್ಯರಿಗೆ ಸೇವೆಯನ್ನು ನೀಡುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.
ನಮ್ಮ ಸಹಕಾರ ಕ್ಷೇತ್ರದಲ್ಲಿ ಸಹ ನಾವು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಇಂದು ರಾಷ್ಟ್ರದಲ್ಲಿ ರೈತರಿಗೆ ಸರಬರಾಜುವಾಗುತ್ತಿರುವ ರಸಗೊಬ್ಬರ ಹಾಗೂ ದೈನಂದಿನ ಜೀವನದ ಅವಶ್ಯಕವಾದ ಹಾಲಿನ ವಿತರಣೆ ಸಹಕಾರ ಕ್ಷೇತ್ರದ ಮುಖಾಂತರ ಶೇ.80 ಪ್ರತಿಶತಕ್ಕಿಂತ ಅಧಿಕ ಪ್ರಮಾಣದಲ್ಲಿ ವಿತರಣೆ ಯಾಗುತ್ತಿರುವುದು ಸಹಕಾರ ಕ್ಷೇತ್ರದ ಹಿರಿಮೆ. ಇಂತಹ ಹಲವಾರು ವಿಷಯಗಳ ಕುರಿತು ನಾವೆಲ್ಲ ಜಾಗೃತಿ ಮುಡಿಸಬೇಕಾಗಿದೆ ಎಂದು ಸಹಕಾರಿಗಳಿಗೆ ಕರೆ ನೀಡಿದರು.