ಬೆಂಗಳೂರು:ನಮ್ಮ ಮೆಟ್ರೋದಲ್ಲಿ ಜನ ಸಂಚಾರ ಹೇರಳವಾಗಿದ್ದು, ಅದು ಪೀಕ್ ಅವರ್ ನಲ್ಲಂತೂ ಕೇಳುವುದೇ ಬೇಡ ಹೆಜ್ಜೆ ಇಡಲೂ ಸಾಧ್ಯವಿಲ್ಲದಷ್ಟು ಜನದಟ್ಟಣೆ, ನೂಕು ನುಗ್ಗಲು. ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಎಂ ಜಿ ರಸ್ತೆಗೆ ಪ್ರತಿನಿತ್ಯ ಸಂಚರಿಸುವ 59 ವರ್ಷದ ಬಾಲಕೃಷ್ಣ ರೈ ಮೆಟ್ರೋ ಹತ್ತಲು ಹೋಗಿ ನೂಕು ನುಗ್ಗಲಿನಿಂದ ಬಿದ್ದ ಪರಿಣಾಮ ಸೊಂಟದ ಮೂಳೆಯನ್ನೇ ಮುರಿದುಕೊಂಡಿರುವ ಘಟನೆ ನಡೆದಿದೆ.
ರಕ್ಷಣಾ ಇಲಾಖೆಯಲ್ಲಿ ಅಕೌಂಟ್ಸ್ ಆಫೀಸರ್ ಆಗಿರುವ ಬಾಲಕೃಷ್ಣ ರೈ ಇದೀಗ ನಗರದ ಹೊಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಹಿಪ್ ಬದಲಾವಣೆ ಸರ್ಜರಿ ನಡೆಯಲಿದೆ. ಹೃದ್ರೋಗಿಯಾಗಿರುವ ಬಾಲಕೃಷ್ಣ ರೈಯವರಿಗೆ ಸಕ್ಕರೆ ಕಾಯಿಲೆ ಕೂಡ ಇದೆ. ಹಾಗಾಗಿ ಗುಣಮುಖವಾಗಲು ಕನಿಷ್ಠ 3 ತಿಂಗಳು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ಪೀಕ್ ಅವರ್ ನಲ್ಲಿ ಮಟ್ರೊ ನಿಲ್ದಾಣದಲ್ಲಿ ಇರುವ ವಿಪರೀತ ಜನದಟ್ಟಣೆಯಲ್ಲಿ ಪ್ರಯಾಣಿಕರು ತಮ್ಮ ಸುರಕ್ಷತೆ ಕಾಪಾಡುವುದು ಅಗತ್ಯವಾಗಿದೆ