ಮಂಗಳೂರು ವಿಮಾನ ನಿಲ್ದಾಣ ಎಂದ ತಕ್ಷಣ ಆ ಕರಾಳ ದಿನದ ಕಹಿ ಘಟನೆ ನೆನಪು ಆಗುತ್ತದೆ. ಮಂಗಳೂರು ಮಹಾ ವಿಮಾನ ದುರಂತ ನಡೆದು ಇಂದಿಗೆ 9 ವರ್ಷಗಳು ಕಳೆದಿವೆ. ಈ ದುರಂತದಲ್ಲಿ 158 ಮಂದಿ ಸಾವನ್ನಪಿದ್ದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ 2010 ರ ಮೇ 22 ರಂದು ಮುಂಜಾನೆಯ ಸಮಯ. ಒಂದೆಡೆ ಜಿಟಿ ಜಿಟಿ ಮಳೆ.
ಮಬ್ಬುಗತ್ತಲ ನಸುಕಿನಲ್ಲಿ ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಂದಿ ಗಾಢ ನಿದ್ರೆಗೆ ಜಾರಿದ ಸಮಯ. ಕೆಲವರು ಇನ್ನೇನು ತಮ್ಮ ಊರು ತಲುಪಿತು ಎಂದು ಇಳಿಯುವ ತವಕದಲ್ಲಿದ್ದರು. ಅಷ್ಟರಲ್ಲಿ ಆ ದುರಂತ ಸಂಭವಿಸಿ ಹೋಗಿತ್ತು. ನೋಡು ನೋಡುತ್ತಲೇ 158 ಮಂದಿ ಸುಟ್ಟು ಕಾರಕಲಾಗಿದ್ದರು.
ದುಬೈ ಯಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ IX812 ತನ್ನ ಅವಶೇಷ ಉಳಿಸಿಕೊಳ್ಳದೆ ಬಜ್ಪೆ ಕೆಂಜಾರಿನ ಕಣಿವೆಯಲ್ಲಿ ಸುಟ್ಟು ಕರಕಲಾಗಿತ್ತು. ಬೆಳಕು ಹರಿಯುತಿದ್ದಂತೆಯೇ ಮಂಗಳೂರುನಲ್ಲಿ ಶೋಕದ ಛಾಯೆ ಆವರಿಸಿತ್ತು. ನಿದ್ದೆಯ ಮಂಪರಿನಲ್ಲಿದ್ದ 158 ಮಂದಿ ಇಹಲೋಕ ತ್ಯಜಿಸಿದ್ದರು.
ವಿಮಾನದಲ್ಲಿ ಒಟ್ಟು 166 ಮಂದಿ ಪ್ರಯಾಣಿಕರಿದ್ದು 8 ಮಂದಿ ಬದುಕಿ ಉಳಿದಿದ್ದರು. ಇಂದಿಗೆ ಈ ಘಟನೆ ನಡೆದು 9 ವರ್ಷಗಳಾಗಿವೆ. ಆ ದಿನದ ಕರಾಳ ಛಾಯೆ ಮಾತ್ರ ಇನ್ನು ಹಾಗೆ ಉಳಿದಿದೆ. ಜಿಲ್ಲಾಡಳಿತದ ವತಿಯಿಂದ ವಿಮಾನ ದುರಂತದಲ್ಲಿ ಸಾವನ್ನಪಿದ್ದವರಿಗೆ ಶ್ರದ್ಧಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು.