ಮಂಗಳೂರು: ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹಾಗೂ ಕೆಪಿಸಿಸಿ ಸದಸ್ಯ ಬಂಡ್ವಾಳದ ಪ್ರಕಾಶ್ ಶೆಟ್ಟಿ ತುಂಬೆ ನಡುವೆ ಹೊಡೆದಾಟ ನಡೆದ ಘಟನೆ ಇಂದು ನಡೆದಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಇಲ್ಲಿನ ಮಲ್ಲಿಕಟ್ಟೆಯಲ್ಲಿರುವ ಕಚೇರಿಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ನಡೆದ ಸಭೆಯಲ್ಲಿ ಶಾಸಕರು ಮತ್ತು ನಾಯಕರ ಸುಮ್ಮುಖದಲ್ಲೇ ಹರೀಶ್ ಕುಮಾರ್ ಮತ್ತು ಪ್ರಕಾಶ್ ಶೆಟ್ಟಿ ತುಂಬೆ ನಡುವೆ ಹೊಡೆದಾಟ ನಡೆದಿದೆ.
ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯ ಬಗ್ಗೆ ಚರ್ಚೆ ನಡೆದಿದ್ದು ನಂತರ ಬ್ಲಾಕ್‌ಗಳಲ್ಲಿ ಪಕ್ಷದ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸುವ ಬಗ್ಗೆ ಮಾತುಕತೆ ನಡೆದಿತ್ತು. ಈ ನಡುವೆ ಈಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ಸನ್ಮಾನ ಮಾಡಲು ರಾಜೀವ ಗಾಂಧಿ ಪಂಚಾಯಿತಿ ರಾಜ್ ಸಂಘಟನೆ ಮುಂದಾಗಿತ್ತು. ಆಗ ಭಿನ್ನಾಭಿಪ್ರಾಯ ಮೂಡಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಎಂದು ತಿಳಿಸಲಾಗಿದೆ.
ಚುನಾಯಿತ ಸದಸ್ಯರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಸನ್ಮಾನಿಸಬೇಕು ಎಂದು ಪ್ರಕಾಶ್ ಶೆಟ್ಟಿ ಆಗ್ರಹಿಸಿದ್ದರು. ಮತ್ತೊಂದು ಸಭೆ ನಡೆಯಬೇಕಾಗಿರುವುದರಿಂದ ಸನ್ಮಾನ ಕಾರ್ಯಕ್ರಮವನ್ನು ಬೇಗ ಮುಗಿಸಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ಈ ವಿಷಯವೇ ಗಂಭೀರವಾಗಿದ್ದು, ಮಾತು ವಿಕೋಪಕ್ಕೆ ತಿರುಗಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಶಾಸಕರಾದ ಮಂಜುನಾಥ ಭಂಢಾರಿ, ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್, ಮಿಥುನ್ ರೈ ಮುಂತಾದವರ ಸಮ್ಮುಖದಲ್ಲೇ ಗದ್ದಲ ನಡೆದಿದ್ದು ನಂತರ ಎಲ್ಲರೂ ಸಮಾಧಾನಪಡಿಸಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.