ಬುಧವಾರ ಬೆಳಗ್ಗೆಯಿಂದಲೇ ಪ್ರಚಾರ ಕಾರ್ಯದಿಂದ ತೊಡಗಿಸಿಕೊಂಡಿರುವ ಮಂಜುಳಾ ಅರವಿಂದ ಲಿಂಬಾವಳಿ ವರ್ತೂರು, ಬಳಗೆರೆ, ಸೊರುಹುಣಸಿ, ಗುಂಜೂರು, ಕಾಚಮಾರನಹಳ್ಳಿ, ಹಾಗೂ ಕೊಡತಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರಳಿ ಮತಯಾಚಿಸಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದು ಭವಿಷ್ಯದ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿಕೊಂಡರು.2008ರಿಂದ ಇದುವರೆಗೂ ಮೂರು ಬಾರಿ ಅರವಿಂದ ಲಿಂಬಾವಳಿ ಜನರಿಂದ ಆಯ್ಕೆಯಾಗಿದ್ದಾರೆ. ರಸ್ತೆ, ಚರಂಡಿ ಹಾಗೂ ಕೆರೆ ಅಭಿವೃದ್ಧಿ ಸೇರಿದಂತೆ ಹಲವು ರೀತಿಯ ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ. ಕಾರ್ಯಕರ್ತರ ಅಣಿತಿಯಂತೆ ಕೆಲಸ ಮಾಡಿದ್ದಾರೆ. ಅವರ ಕೆಲಸವೇ ನನಗೆ ಶ್ರೀರಕ್ಷೆಯಾಗಿದೆ ಎಂದರು.
ಕಳೆದ ಮೂರು ಅವಧಿಗಳಲ್ಲಿಯೂ ತಲಾ ಒಬ್ಬೊಬ್ಬರಂತೆ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದೀಗ ಅವರೆಲ್ಲರೂ ಕಳೆದುಹೋಗಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಕಳೆದ ಒಂದು ತಿಂಗಳಿಂದ ಕಾಂಗ್ರೆಸ್ ಆಭ್ಯರ್ಥಿ ಹೇಳುತ್ತಿದ್ದಾರೆ. ಇಷ್ಟು ವರ್ಷ ಎಲ್ಲಿ ಹೋಗಿದ್ದರು. ಸುಖಾಸುಮ್ಮನೆ ಆರೋಪ ಸರಿಯಲ್ಲ. ಕ್ಷೇತ್ರ ಪರಿವೀಕ್ಷಣೆ ನಡೆಸಿದಾಗ ಕೆಲಸ ಮಾಡಿರುವುದು ಗೊತ್ತಾಗುತ್ತದೆ. ಈ ಬಾರಿ ಕ್ಷೇತ್ರದಿಂದ ಗಂಟುಮೂಟೆ ಕಟ್ಟುವಂತೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.