ಅಪಘಾತದಲ್ಲಿ ಮೊಣಕಾಲು ಕಳೆದುಕೊಂಡಿದ್ದ ಜಿಮ್‌ ಟ್ರೇನರ್‌ಗೆ ಯಶಸ್ವಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

ಬುಧವಾರ, 3 ಮೇ 2023 (18:50 IST)
ಗಂಭೀರ ಅಪಘಾತದಿಂದ ತನ್ನ ಮೊಣಕಾಲಿನ ಅಸ್ಥಿತ್ವವನ್ನೇ ಕಳೆದುಕೊಂಡು ಸತತ 3 ವರ್ಷಗಳಿಂದ ವೀಲ್‌ಚೇರ್‌ನಲ್ಲಿಯೇ ಜೀವನ ಸಾಗಿಸುತ್ತಿದ್ದ 30  ವರ್ಷದ ಜಿಮ್‌ ಟ್ರೇನರ್‌ಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ "ಸಂಕಿರ್ಣ ಮೊಣಕಾಲು ಬದಲಿ" ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. 
 
ಫೋರ್ಟಿಸ್‌ ಆಸ್ಪತ್ರೆಯ ಮೂಳೆರೋಗದ ನಿರ್ದೇಶಕ ಮತ್ತು ಜಂಟಿ ಬದಲಿ ಶಸ್ತ್ರಚಿಕಿತ್ಸಕ ಡಾ. ರಘು ನಾಗರಾಜ್ ಅವರ ತಂಡ ಈ ಚಿಕಿತ್ಸೆಯನ್ನು ನಡೆಸಿದೆ. ಈ ಕುರಿತು ಮಾತನಾಡಿದ ಡಾ. ರಘು, ಜಿಮ್‌ ಟ್ರೇನರ್‌ ೩ ವರ್ಷದ ಹಿಂದೆ ಗಂಭೀರ ಅಪಘಾತದಲ್ಲಿ ತನ್ನ ಮೊಣಕಾಲನ್ನೇ ಕಳೆದುಕೊಂಡರು. ತಮ್ಮ ಮೊಣಕಾಲನ್ನು ಸರಿ ಪಡಿಸಿಕೊಳ್ಳಲು ಸಾಕಷ್ಟು ಆಸ್ಪತ್ರೆ ಸುತ್ತಿದರೂ ಸಾಧ್ಯವಾಗಲಿಲ್ಲ. ರೋಗಿಯ ಮೊಣಕಾಲಿನ ಮೂಳೆ ಸಂಪೂರ್ಣ ಬೇರ್ಪಟ್ಟಿತ್ತು. ಇದರ ಮರುಜೋಡಣೆ ಅಸಾಧ್ಯದ ಕೆಲಸವೇ ಆಗಿತ್ತು. ಆದರೆ, ನಮ್ಮ ತಂಡ ಇದನ್ನು ಸವಾಲಾಗಿ ಸ್ವೀಕರಿಸಿ, ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.  ಸತತ ಎರಡೂವರೆ ಅವಧಿಯ ಶಸ್ತ್ರಚಿಕಿತ್ಸೆಯಲ್ಲಿ ಮೊಣಕಾಲಿನ ಕೀಲು ತೆಗೆದು ಕೃತಕ ಮೊಣಕಾಲಿನ ಕೀಲು ಜೋಡಿಸಲಾಗಿದೆ. ಅಪಘಾತ ನಡೆದು ಮೂರು ವರ್ಷದ ಬಳಿಕ ಈ ರೀತಿಯ ಶಸ್ತ್ರಚಿಕಿತ್ಸೆ ಸವಾಲಿನ ಕೆಲಸ. ಏಕೆಂದರೆ, ಈ ಅವಧಿಯೊಳಗಾಗಲೇ ಕಾಲಿನ ಮೀನುಖಂಡ ಸೇರಿದಂತೆ ಇತರೆ ನರ ಹಾಗೂ ಮೂಳೆಗಳು ತನ್ನ ಅಸ್ವಿತ್ವವನ್ನೇ ಕಳೆದುಕೊಂಡು ಸೊರಗಿರುತ್ತವೆ. ಇದೀಗ ಈ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯಿಂದ ಇಡೀ ಮೊಣಕಾಲಿನ ಕೆಳಗೀನ ಭಾಗಕ್ಕೂ ಜೀವ ನೀಡಲಾಗಿದೆ. ಶಸ್ತ್ರಚಿಕಿತ್ಸೆಯ ಕೆಲ ದಿನಗಳ ಬಳಿಕ ರೋಗಿಯೂ ವೀಲ್‌ಚೇರ್‌ನನ್ನು ಬಿಟ್ಟು, ಕೋಲಿನ ಸಹಾಯದ ಮೂಲಕ ನಡೆಯುವುದನ್ನು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಸಹಾಯವಿಲ್ಲದೇ ತನ್ನ ಕಾಲ ಮೇಲೆ ನಡೆಯಲಿದ್ದಾರೆ ಎಂದು ವಿವರಿಸಿದರು. 
ಫೋರ್ಟಿಸ್‌ ಆಸ್ಪತ್ರೆ ಬ್ಯುಸಿನೆಸ್ ಹೆಡ್ ಅಕ್ಷಯ್ ಒಲೆಟಿ ಮಾತನಾಡಿ, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಸಾಕಷ್ಟು ಸವಾಲಿನ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಇದೀಗ ಈ ಸಾಲಿನ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯೂ ಸೇರಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ