ವಸತಿ ಶಾಲೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಬೆನ್ನಲ್ಲೆ ನಾಳೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾರ್ಗಸೂಚಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಸತಿ ಶಾಲೆಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಜಿಲ್ಲೆಯಲ್ಲಿ ಮಾತ್ರ ಕೊರೊನಾ ಹೆಚ್ಚಾಗಿ ಕಂಡುಬಂದಿದೆ. ಬೇರೆಲ್ಲಾ ಜಿಲ್ಲೆಗಳಲ್ಲಿ ನಿಯಂತ್ರಣದಲ್ಲಿದೆ. ನಾಳೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಅಧಿಕಾರಿಗಳು, ಸಚಿವರೊಂದಿಗೆ ಚರ್ಚೆ ಮಾಡಿ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದರು. "ರಾಜ್ಯಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿ ತರುತ್ತೇವೆ. ಪೋಷಕರು ಅಥವಾ ಯಾರೂ ಕೂಡ ಆತಂಕ ಪಡುವ ಅಗತ್ಯತೆ ಇಲ್ಲ. ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು. ಈಗಾಗಲೇ ಹೇಳಿದ್ದೇವೆ ಆ ಪ್ರಕಾರ ಜಾಗೃತಿ ವಹಿಸಿದರೆ ಸಾಕು. ನಾಳೆ ಸಭೆ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತವೆ' ಎಂದರು.