ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ!

ಮಂಗಳವಾರ, 7 ಡಿಸೆಂಬರ್ 2021 (07:32 IST)
ಚಿಕ್ಕಮಗಳೂರು : ಒಂದೇ ದಿನ ಒಂದೇ ಸ್ಥಳಕ್ಕೆ ಐದು ಸಾವಿರಕ್ಕೂ ಅಧಿಕ ಪ್ರವಾಸಿಗರು. ಮೂರೇ ದಿನಕ್ಕೆ ಒಂದೇ ಶಾಲೆಯ 100ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೊನಾ ಪತ್ತೆ.
ಕೊರೊನಾ ಮೂರನೇ ಅಲೆ ಆರಂಭವಾಯ್ತೋ ಅಥವಾ ಪ್ರವಾಸಿಗರಿಂದಲೇ ಕೊರೊನಾ ಹರಡುತ್ತಿದ್ಯೋ ಗೊತ್ತಿಲ್ಲ. ಆದ್ರೆ ರಾಜ್ಯದ ವಿವಿಧ ಮೂಲೆಗಳಿಂದ ಬರ್ತಿರೋ ಪ್ರವಾಸಿಗರೇ ಆ ಜಿಲ್ಲೆಗೆ ಮಗ್ಗಲ ಮುಳ್ಳಾಗಿದ್ದಾರೆ. ಹೀಗಾಗಿ ಜಿಲ್ಲೆಯ ಜನ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಗ್ರಾಮದಲ್ಲಿರುವ ಜವಾಹರ್ ನವೋದಯ ವಸತಿ ಶಾಲೆಯ 93 ಮಕ್ಕಳಲ್ಲಿ ಕೊರೊನಾ ಪತ್ತೆಯಾಗಿದೆ. ಆದರೆ ಈ ಸೋಂಕು ಎಲ್ಲಿಂದ ಬಂತು ಅನ್ನೋದೇ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
 6 ರಿಂದ 12ನೇ ತರಗತಿವರೆಗೆ ಇರುವ ವಸತಿ ಶಾಲೆಯ ಮಕ್ಕಳು 2 ತಿಂಗಳ ಹಿಂದಷ್ಟೆ ಶಾಲೆಗೆ ಬಂದಿದ್ದು, ಹೊರಗೆ ಎಲ್ಲೂ ಹೋಗಿಲ್ಲ. ಆಟ -ಪಾಠ ಎಲ್ಲವೂ ವಸತಿ ಶಾಲೆ ಒಳಗೆ ಆಗುತ್ತಿದೆ. ಆರಂಭದಲ್ಲಿ ಇಬ್ಬರು ಶಿಕ್ಷಕರು, ಮೂವರು ಸಿಬ್ಬಂದಿಗಳಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಶಿಕ್ಷಕರು ಕೂಡ ಶಾಲೆಯಿಂದ ಹೊರಬಂದಿಲ್ಲ. ಸದ್ಯ ಜಿಲ್ಲಾಡಳಿತ ಸೋಂಕಿನ ನಿಗೂಢ ಮೂಲ ಹುಡುಕಲು ಪರದಾಡುತ್ತಿದೆ.
ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಶಾಲೆಯಲ್ಲಿರುವ 400ಕ್ಕೂ ಅಧಿಕ ಮಕ್ಕಳನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 93 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 107 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಶಾಲೆಯನ್ನೇ ಸೀಲ್ಡೌನ್ ಮಾಡಿರೋ ಜಿಲ್ಲಾಡಳಿತ ಶಾಲೆ ಆವರಣದಲ್ಲೇ ಮೂರು ಅಂಬುಲೆನ್ಸ್ ಬಿಟ್ಟಿದ್ದು, ಶಾಲೆಗೆ ದಿನಕ್ಕೆರಡು ಬಾರಿ ಸ್ಯಾನಿಟೈಸ್ ಮಾಡುತ್ತಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಶಾಲೆಯಲ್ಲೇ ಮೊಕ್ಕಾಂ ಹೂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ