ಬೆಂಗಳೂರು: ಮೈಕ್ರೋ ಫೈನಾನ್ಸ್ ದಂಧೆಗೆ ಸರ್ಕಾರದ ಕುಮ್ಮಕ್ಕು ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸರ್ಕಾರದ ಕುಮ್ಮಕ್ಕು ಇಲ್ಲದಿದ್ದರೆ ಇದು ಇಲ್ಲಿನವರೆಗೆ ಮುಂದುವರೆಯುತ್ತಿರಲಿಲ್ಲ. ಎರಡೂ ಕಡೆಯಿಂದ ವಸೂಲಿ ಮಾಡಲು ಪೊಲೀಸರಿಗೆ ಇದು ದಂಧೆಯಾಗಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳಕ್ಕೆ ಅನೇಕರ ಸಾವು ಸಂಭವಿಸಿದ ಬಳಿಕ ಎಚ್ಚೆತ್ತ ಕಾಂಗ್ರೆಸ್ ಸರ್ಕಾರ ಒಂದು ಸಭೆ ಕರೆದು ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಚರ್ಚೆ ನಡೆಸಿದೆ. ಹೊಸ ಕಾನೂನು ಜಾರಿಗೆ ತಂದು, ಅವರನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡುವುದಾಗಿ ತಿಳಿಸಿದೆ ಎಂದಿದ್ದಾರೆ.
ಮೈಕ್ರೋ ಫೈನಾನ್ಸ್‌ಗಳ ಸಮಸ್ಯೆ ಕುರಿತು ಅನೇಕ ಮುಖಂಡರು ಗಮನ ಸೆಳೆದರೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಕೊನೆಗೂ ಇವತ್ತು ಒಂದು ತೀರ್ಮಾನಕ್ಕೆ ಬಂದಿದೆ. ಫೈನಾನ್ಸ್ ವಸೂಲಿಗೆ ತೊಂದರೆ ಕೊಟ್ಟರೆ, ಗೂಂಡಾಗಳನ್ನು ಕಳುಹಿಸಿದರೆ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಜನರ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ. ಕಾಂಗ್ರೆಸ್ ಸರ್ಕಾರದ ಹಿತದೃಷ್ಟಿಯಿಂದ ಅಲ್ಲ ಎಂದರು.