ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದ್ದರೂ ಡೋಂಟ್ ಕೇರ್

Krishnaveni K

ಸೋಮವಾರ, 27 ಜನವರಿ 2025 (11:03 IST)
ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ನೀಡುತ್ತಿರುವ ಬಗ್ಗೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಸಭೆ ಕರೆದು ಅವರಿಗೆ ಖಡಕ್ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮತ್ತೊಬ್ಬ ಮಹಿಳೆ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
 

ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ವಸೂಲಾತಿ ಕಿರುಕುಳದಿಂದ ಈಗಾಗಲೇ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮೊನ್ನೆ ಸಿಎಂ ಸಿದ್ದರಾಮಯ್ಯ ಮೈಕ್ರೋ ಫೈನಾನ್ಸ್ ಮಾಲಿಕರ ಸಭೆ ಕರೆದು ಕೆಲವೊಂದು ಗೈಡ್ ಲೈನ್ಸ್ ನೀಡಿದ್ದರು.

ಸಾಲ ವಸೂಲಾತಿಗೆ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಬೇಕಾಬಿಟ್ಟಿ ಬೆದರಿಕೆ ಹಾಕಿ, ಸಮಯವಲ್ಲದ ಸಮಯದಲ್ಲಿ ಹೋಗಿ ಸಾಲ ಕೇಳುವಂತಿಲ್ಲ. ನಿಯಮ ಮೀರಿ ನಡೆದುಕೊಂಡರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಸಿಎಂ ಎಚ್ಚರಿಕೆಯೂ ಯಾಕೋ ಫಲಗೂಡುವ ಲಕ್ಷಣ ಕಾಣುತ್ತಿಲ್ಲ.

ನಂಜನಗೂಡಿನಲ್ಲಿ 53 ವರ್ಷದ ಜಯಶೀಲಾ ಎಂಬವರು ಮೈಕ್ರೋ ಫೈನಾನ್ಸ್ ಹಾವಳಿಗೆ ಬೆದರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈಕೆ ಹಸು ಸಾಕಣಿಕೆಗಾಗಿ 5 ಲಕ್ಷ ರೂ. ಸಾಲ ಪಡೆದುಕೊಂಡಿದ್ದಳು. ಇದಕ್ಕೆ ಪ್ರತೀ ತಿಂಗಳು 20000 ರೂ. ಇಎಂಐ ಕಟ್ಟಬೇಕಾಗಿತ್ತು. ಆದರೆ ಇತ್ತೀಚೆಗೆ ಹಸು ಮೃತಪಟ್ಟಿತ್ತು. ಇದರಿಂದಾಗಿ ಸಾಲ ತೀರಿಸುವುದು ಕಷ್ಟವಾಗಿತ್ತು. ಈ ಹಿನ್ನಲೆಯಲ್ಲಿ ಮಹಿಳೆ ವಿಷ ಸೇವಿಸಿ ತಮ್ಮ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ