ಬೆಂಗಳೂರು: ಇತ್ತೀಚೆಗಷ್ಟೇ ನಡೆದ ಪುರುಷ ಮತ್ತು ಮಹಿಳಾ ಖೋ ಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ಭಾರತ ತಂಡದ ಭಾಗವಾಗಿದ್ದ ಕನ್ನಡಿಗರಾದ ಬಿ ಚೈತ್ರಾ ಮತ್ತು ಎಂಕೆ ಗೌತಮ್ ಅವರನ್ನು ಇಂದು ಸಿಎಂ ಸಿದ್ದರಾಮಯ್ಯ ಕರೆದು ಸನ್ಮಾನಿಸಿದ್ದಾರೆ.
ಖೋ ಖೋ ವಿಶ್ವಕಪ್ ಗೆದ್ದ ಬೆನ್ನಲ್ಲೇ ಇತರೆ ಕ್ರೀಡಾಪಟುಗಳಂತೇ ನಮ್ಮ ಸಾಧನೆಯನ್ನೂ ಪರಿಗಣಿಸಿ ಎಂದು ಈ ಇಬ್ಬರೂ ಮನವಿ ಮಾಡಿದ್ದರು. ಇದೀಗ ಕೊನೆಗೂ ಸಿಎಂ ಸಿದ್ದರಾಮಯ್ಯ ಇಬ್ಬರನ್ನೂ ತಮ್ಮ ಕಚೇರಿಗೆ ಕರೆದು ಸನ್ಮಾನಿಸಿದ್ದಾರೆ.
2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡವು ಎರಡೂ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಲು ಅತ್ಯುತ್ತಮ ಪ್ರದರ್ಶನ ನೀಡಿದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರು ನರಸೀಪುರದ ಕುರಬೂರಿನ ಚೈತ್ರಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಇಬ್ಬರೂ ಪಟುಗಳಿಗೆ ತಲಾ 5 ಲಕ್ಷ ರೂಪಾಯಿಯ ಬಹುಮಾನ ಘೋಷಿಸಿದರು.
ಸಚಿವರಾದ ಚಲುವರಾಯಸ್ವಾಮಿ ಮತ್ತು ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.