ರಾಜ್ಯದ ಜನರಿಗೆ ತಿಂಗಳ ಆರಂಭದಲ್ಲೇ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಒಂದು ಕಡೆ ತರಕಾರಿ ಆಯ್ತು. ಇದೀಗ ಹಾಲು ದುಬಾರಿ. ಇನ್ನು ಇಷ್ಟಕ್ಕೆ ಫುಲ್ ಸ್ಟಾಪ್ ಹಾಕದೇ ಹೋಟೆಲ್ ನಲ್ಲಿನ ಪ್ರೈಸ್ ಕೂಡ ಜಾಸ್ತಿ. ಅಬ್ಬಾ ಇಷ್ಟೆಲ್ಲಾ ದುಬಾರಿ ದುನಿಯಾದಲ್ಲಿ ಹೆಂಗಪ್ಪ ಜೀವನ ಅಂತಾ ಜನ ಫುಲ್ ಶಾಕ್ ಆಗ್ಬಿಟ್ಟಿದ್ದಾರೆ.ಒಂದು ಕಡೆ ಹಾಲಿನ ದರ ಏರಿಕೆಯ ಬಿಸಿ.. ಇನ್ನೊಂದು ಕಡೆ ಹೋಟೆಲ್ ತಿನಿಸುಗಳು ಕೂಡ ದುಬಾರಿ. ಹೌದು ನಂದಿನಿ ಹಾಲಿನ ದರ ಏರಿಕೆ ಇಂದಿನಿಂದ ಅಂದರೆ ಜಾರಿಗೆ ಬಂದಿದೆ. ಹಾಲು ಉತ್ಪಾದಕರ ಬೇಡಿಕೆ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ಬೆಲೆ ಹೆಚ್ಚಳಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೈನುಗಾರರಿಗೆ ಈ ದರ ಏರಿಕೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದರೇ, ಇತ್ತ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಇನ್ನು ಹಾಲು, ದಿನಸಿ ಸೇರಿದಂತೆ ಇತರೆ ಬೆಲೆಗಳ ಏರಿಕೆ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಎಲ್ಲಾ ತಿಂಡಿ, ತಿನಿಸುಗಳ ದರವನ್ನು ಶೇ. 10ರಷ್ಟು ಹೆಚ್ಚಳ ಮಾಡಿದೆ. ಕಾಫಿ, ಟೀ, ಉಪಾಹಾರ, ಊಟ, ಚಾಟ್ಸ್ ಸೇರಿದಂತೆ ಎಲ್ಲ ಆಹಾರ ಪದಾರ್ಥಗಳ ದರ ಶೇ. 10ರಷ್ಟು ಹೆಚ್ಚಾಗಿದೆ. ಕಾಫಿ, ಟೀ ದರವು 2 ರಿಂದ 3 ರೂವರೆಗೆ ಜಾಸ್ತಿಯಾಗಿದೆ. ಹಾಗೆಯೇ, ದೋಸೆ, ಇಡ್ಲಿ, ವಡೆ, ರೈಸ್‌ಬಾತ್, ಬಿಸಿಬೇಳೆ ಬಾತ್, ಚೌಚೌ ಬಾತ್ ಮತ್ತಿತರ ತಿಂಡಿಗಳ ಬೆಲೆಯೂ 5 ರೂಪಾಯಿಯಷ್ಟು ಹೆಚ್ಚಾಗಿದೆ. ಊಟದ ದರವನ್ನು 5 ರಿಂದ 10 ರೂಪಾಯಿ ವರೆಗೆ ಏರಿಕೆ ಮಾಡಲು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ.