ಬೆಂಗಳೂರು: ಕೇಂದ್ರ ಸರ್ಕಾರದ ರಿಯಾಯಿತಿ ದರದಲ್ಲಿ ಔಷಧಿ ನೀಡುವ ಜನೌಷಧಿ ಕೇಂದ್ರಗಳನ್ನು ಸರ್ಕಾರೀ ಆಸ್ಪತ್ರೆಗಳ ಆವರಣದಲ್ಲಿ ತೆರೆಯುವುದು ಬೇಡ ಎನ್ನುತ್ತಿದ್ದೇವೆ ಅಷ್ಟೇ ಎಂದು ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ನೋಡಿ.
ಕೇಂದ್ರ ಸರ್ಕಾರ ಸಾರ್ಜಜನಿಕರಿಗೆ ದುಬಾರಿ ಔಷಧಿಗಳು ಕಡಿಮೆ ದರದಲ್ಲಿ ಸಿಗಬೇಕು ಎನ್ನುವ ಕಾರಣಕ್ಕೆ ರಿಯಾಯಿತಿ ದರದಲ್ಲಿ ಔಷಧಿ ನೀಡುವ ಜನೌಷಧಿ ಕೇಂದ್ರಗಳನ್ನು ದೇಶದಾದ್ಯಂತ ತೆರೆದಿದೆ. ಆದರೆ ಕರ್ನಾಟಕದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಆದೇಶಿಸಿತ್ತು.
ಇದರ ವಿರುದ್ಧ ಹೈಕೋರ್ಟ್ ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಇದು ನಮ್ಮ ಹಕ್ಕುಗಳ ಉಲ್ಲಂಘನೆ ಎಂದಿದ್ದರು. ಇದರ ತನಿಖೆ ನಡೆಸಿದ ಹೈಕೋರ್ಟ್ ಜನೌಷಧಿ ಕೇಂದ್ರಗಳನ್ನು ಮುಚ್ಚಲು ತಾತ್ಕಾಲಿಕ ತಡೆ ನೀಡಿತ್ತು.
ಇದರ ಬೆನ್ನಲ್ಲೇ ಇಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನೋಡಿ ನಾವು ಜನೌಷಧಿ ಕೇಂದ್ರಗಳು ಬೇಡ ಎನ್ನುತ್ತಿಲ್ಲ. ಸರ್ಕಾರೀ ಆಸ್ಪತ್ರೆಗಳ ಆವರಣದಲ್ಲಿ ಬೇಡ ಎನ್ನುತ್ತಿದ್ದೇವಷ್ಟೇ. ಈಗ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ ಅಷ್ಟೇ. ನಮ್ಮ ವಕೀಲರು ಸರ್ಕಾರದ ನಿಲುವೇನಿದೆ ಎಂದು ಕೋರ್ಟ್ ಗೆ ಮನದಟ್ಟು ಮಾಡಲಿದ್ದೇವೆ ಎಂದಿದ್ದಾರೆ.
ಸಚಿವರ ಹೇಳಿಕೆಗೆ ಸಾರ್ವಜನಿಕರು ತೀವ್ರ ಟೀಕೆ ನಡೆಸಿದ್ದಾರೆ. ಅದೇ ಯಾಕೆ ಬೇಡ ಎನ್ನುವುದನ್ನು ಹೇಳಿ. ನಮಗೆ ರಿಯಾಯಿತಿ ದರದಲ್ಲಿ ಔಷಧಿ ಸಿಗುವಾಗ ಅಂತಹ ಕೇಂದ್ರಗಳನ್ನು ಯಾಕೆ ಮುಚ್ಚುತ್ತೀರಿ? ಒಂದು ವೇಳೆ ಮುಚ್ಚುವುದಿದ್ದರೆ ನಮಗೆ ಸರ್ಕಾರೀ ಆಸ್ಪತ್ರೆಗಳ ಆವರಣದಲ್ಲಿ ಉಚಿತ ಔಷಧಿ ಸಿಗುವಂತೆ ಮಾಡಿ ಎಂದು ಒತ್ತಾಯಿಸಿದ್ದಾರೆ.