ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆ ನಡೆಸುತ್ತಿರುವ ಬೆನ್ನಲ್ಲೇ ಕೆಎಚ್ ಮುನಿಯಪ್ಪ ಅನರ್ಹರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಲು ಸರ್ಕಾರ ಕೆಲವೊಂದು ಮಾನದಂಡಗಳನ್ನು ವಿಧಿಸಿದೆ. ಅದರಂತೆ ಆದಾಯ ತೆರಿಗೆ ಪಾವತಿಸುವವರು, ಸರ್ಕಾರೀ ನೌಕರರು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ. ಅಂತಹ ಕಾರ್ಡ್ ಗಳನ್ನು ರದ್ದು ಮಾಡಿ ಎಪಿಎಲ್ ಗೆ ವರ್ಗಾಯಿಸಲಾಗುವುದು ಎಂದು ಈಗಾಗಲೇ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಅದರಂತೆ ಈಗ ಎಲ್ಲಾ ಗ್ರಾಮ, ವಾರ್ಡ್ ಮಟ್ಟದಲ್ಲಿ ಅನರ್ಹ ಕಾರ್ಡ್ ಗಳನ್ನು ಗುರುತಿಸಿ ಅವುಗಳನ್ನು ಬಿಪಿಎಲ್ ಪಟ್ಟಿಯಿಂದ ಹೊರಹಾಕಲಾಗುವುದು ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಅವರು ಶಾಸಕ ಭರತ್ ಶೆಟ್ಟಿ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.
ನಾವು ಕೇಂದ್ರ ಸರ್ಕಾರದ ಮಾನದಂಡಗಳಿಗೆ ಅನುಸಾರವಾಗಿಯೇ ಬಿಪಿಎಲ್ ಕಾರ್ಡ್ ಗಳಲ್ಲಿ ಅನರ್ಹರನ್ನು ಗುರುತಿಸಿ ಹೊರಹಾಕುತ್ತಿದ್ದೇವೆ. ಈ ಬಗ್ಗೆ ಅನಗತ್ಯ ಗೊಂದಲಗಳು ಬೇಡ. ಅಧಿವೇಶನ ಮುಗಿದ ನಂತರ ಆಹಾರ ಇಲಾಖೆ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಅನರ್ಹರನ್ನು ಗುರುತಿಸಿ ರದ್ದುಗೊಳಿಸುವ ಕೆಲಸ ಮಾಡಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.