ವಕ್ಫ್ ಗಾಗಿ ಯಾವುದೇ ದೇವಸ್ಥಾನ, ರೈತರ ಆಸ್ತಿಯನ್ನು ಮುಟ್ಟಲ್ಲ: ಜಮೀರ್ ಅಹ್ಮದ್

Krishnaveni K

ಶುಕ್ರವಾರ, 13 ಡಿಸೆಂಬರ್ 2024 (11:02 IST)
ಬೆಳಗಾವಿ ಸುವರ್ಣ ಸೌಧ: ವಕ್ಫ್ ಹೆಸರಿನಲ್ಲಿ ನಾವು ಯಾವುದೇ ದೇವಸ್ಥಾನ, ರೈತರ ಆಸ್ತಿಯನ್ನು ಮುಟ್ಟಲ್ಲ ಎಂದು ಸಚಿವ ಜಮೀರ್ ಅಹ್ಮದ್ ಬೆಳಗಾವಿ ಸುವರ್ಣ ಸೌಧದಲ್ಲಿ ಪ್ರಾಮಿಸ್ ಮಾಡಿದ್ದಾರೆ.

ಇತ್ತೀಚೆಗೆ ವಕ್ಫ್ ಬೋರ್ಡ್ ರೈತರು, ದೇವಸ್ಥಾನಗಳ ಆಸ್ತಿಗಳಿಗೆ ನೋಟಿಸ್ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ರಾಜ್ಯ ಬಿಜೆಪಿ ಘಟಕ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಸರ್ಕಾರ ರೈತರ ಜಮೀನಿಗೆ ಕೈ ಹಾಕಿದ್ದಕ್ಕೆ ರೈತ ಸಂಘಟನೆಗಳೂ ಹೋರಾಟಕ್ಕಿಳಿದಿದ್ದವು.

ಇದರ ಬಗ್ಗೆ ಈಗ ಬೆಳಗಾವಿ ಅಧಿವೇಶನದಲ್ಲೂ ವಿಪಕ್ಷಗಳು ಪ್ರಸ್ತಾಪ ಮಾಡಿವೆ. ಗುರುವಾರ ವಕ್ಫ್ ವಿಚಾರವಾಗಿ ನಿಯಮ 68 ರ ಅಡಿಯಲ್ಲಿ ನಡೆದ ಚರ್ಚೆ ಸಂದರ್ಭ ವಕ್ಫ್ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಅನ್ನದಾತರು, ದೇವಸ್ಥಾನಗಳ ಆಸ್ತಿಯನ್ನು ವಕ್ಫ್ ಮುಟ್ಟುವುದಿಲ್ಲ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ರಾಜ್ಯವ್ಯಾಪಿ ಸುಮಾರು 17 ಸಾವಿ ಆಸ್ತಿಗಳನ್ನು ಖಾಸಗಿಯವರು ಒತ್ತುವರಿ ಮಾಡಿದ್ದು,  ಆ ಆಸ್ತಿಗಳನ್ನ ವಶಪಡಿಸಿಕೊಳ್ಳಲಾಗುವುದು ಎಂದಿದ್ದಾರೆ. ಈ ಹಿಂದೆ ವಕ್ಫ್ ಬೋರ್ಡ್ ಹೆಸರಿನಲ್ಲಿ 1.28 ಲಕ್ಷ ಎಕರೆ ಆಸ್ತಿ ದಾನವಾಗಿ ಬಂದಿತ್ತು. ಇದು ಸರ್ಕಾರದ ಆಸ್ತಿಯಲ್ಲ. ದಾನಿಗಳು ನೀಡಿದ ಆಸ್ತಿಯಾಗಿದೆ.  47 ಸಾವಿರ ಎಕರೆ ಭೂ ಸುಧಾರಣೆ ವ್ಯಾಪ್ತಿಗೆ ಹೋಗಿದೆ. ಕೆಲವರು ಖಾಸಗಿ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದು ಅದನ್ನು ಸಂರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಜನರಿಗೆ ಅನಗತ್ಯ ಗೊಂದಲ ಬೇಡ. ತಪ್ಪಾಗಿ ಕೆಲವು ಆಸ್ತಿಗಳು ವಕ್ಫ್ ನದ್ದು ಎಂದು ನಮೂದಾಗಿದ್ದರೆ ಅದನ್ನು ಸರಿಪಡಿಸಲಾಗುವುದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ