ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಚಿವ ಕೆಜೆ ಜಾರ್ಜ್ ಬಳಿಕ ಈಗ ಸಚಿವ ಎಂಬಿ ಪಾಟೀಲ್ ನೀಡಿರುವ ಹೇಳಿಕೆ ವೈರಲ್ ಆಗಿದೆ. ಗೃಹಲಕ್ಷ್ಮಿ ಯೋಜನೆ ತಗೋಬಾರದು, ತಗೊಂಡ್ರೆ ತಪ್ಪಲ್ವಾ ಎಂದಿದ್ದಾರೆ.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅದರಲ್ಲಿ ಮನೆ ಯಜಮಾನಿ ಖಾತೆಗೆ ಪ್ರತೀ ತಿಂಗಳು 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯೂ ಒಂದು.
ಈ ಯೋಜನೆಯಂತೆ ಸರ್ಕಾರ ಪ್ರತೀ ತಿಂಗಳು ಫಲಾನುಭವಿಗಳ ಖಾತೆಗೆ ಹಣ ಹಾಕಬೇಕು. ಆದರೆ ಕಳೆದ ಮೂರು ತಿಂಗಳಿನಿಂದ ಹಣ ಜಮೆ ಆಗಿರಲಿಲ್ಲ. ನಿನ್ನೆ ಈ ಬಗ್ಗೆ ಸಚಿವ ಕೆಜೆ ಜಾರ್ಜ್ ಪ್ರತೀ ತಿಂಗಳು ಹಾಕಕ್ಕೆ ಅದೇನು ಸಂಬಳವಾ ಎಂದು ಪ್ರಶ್ನಿಸಿ ವಿವಾದಕ್ಕೀಡಾಗಿದ್ದರು.
ಇಂದು ಈ ವಿಚಾರವನ್ನು ಸಚಿವ ಎಂಬಿ ಪಾಟೀಲ್ ಗೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು ನೋಡ್ರೀ ಯಾರು ಬಡವರಿರುತ್ತಾರೆ ಅವರಿಗೆ ಫಲ ಸಿಗಬೇಕು. ಶ್ರೀಮಂತರು ಗೃಹಲಕ್ಷ್ಮಿ ಯೋಜನೆಯನ್ನು ತಗೊಳ್ಳಬಾರದು. ಈಗ ಎಂಬಿ ಪಾಟೀಲ್ ಆದ ನನ್ನ ಮನೆಯವರು ತಗೊಂಡ್ರೆ ತಪ್ಪಲ್ವಾ? ಶ್ರೀಮಂತರು ತಾವಾಗಿಯೇ ಈ ಯೋಜನೆಯ ಫಲಾನುಭವಿಗಳಾಗಿದ್ದರೆ ತಮ್ಮ ಹೆಸರು ಹಿಂಪಡೆಯಬೇಕು. ಇದರಿಂದ ಬಡವರಿಗೆ ಯೋಜನೆ ಸಿಗುವಂತಾಗುತ್ತದೆ ಎಂದಿದ್ದಾರೆ.