ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಮೊದಲ ವಿಕೆಟ್ ಪತನವಾಗಿದೆ. ವಾಲ್ಮೀಕಿ ನಿಗಮದಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರೂ. ಹಗರಣ ಮತ್ತು ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಹೆಸರು ಕೇಳಿಬರುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ರಾಜೀನಾಮೆ ನೀಡಬೇಕು ಎಂದು ವಿಪಕ್ಷ ಬಿಜೆಪಿ ಒತ್ತಾಯಿಸಿತ್ತು.
ಇದೀಗ ತೀವ್ರ ಒತ್ತಡಕ್ಕೆ ಮಣಿದ ಸಚಿವ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದಾರೆ. ಸ್ವತಃ ಸಿದ್ದರಾಮಯ್ಯ ರಾಜೀನಾಮೆ ನೀಡಲು ನಾಗೇಂದ್ರಗೆ ಸೂಚಿಸಿದ್ದರು. ಸಿಎಂ ಭೇಟಿ ಮಾಡಿದ ಬಳಿಕ ರಾಜೀನಾಮೆ ಸಲ್ಲಿಸಿದ ಅವರು ಮಾಧ್ಯಮಗಳಿಗೆ ಯಾವುದೆ ಹೇಳಿಕೆನೀಡದೇ ನಿರ್ಗಮಿಸಿದ್ದಾರೆ.
ನಾಗೇಂದ್ರ ರಾಜೀನಾಮೆಗೆ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಗರಣದಲ್ಲಿ ನಾಗೇಂದ್ರ ಪಾತ್ರವಿಲ್ಲ. ಆದರೆ ಪಕ್ಷದ ಘನತೆಗೆ ಕುತ್ತು ಬರಬಾರದು ಎಂದು ರಾಜೀನಾಮೆ ನೀಡುತ್ತಿದ್ದಾರೆ ಎಂದಿದ್ದರು.