ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಹಗರಣ ಆರೋಪಕ್ಕೆ ಸಿಲುಕಿರುವ ಸಚಿವ ನಾಗೇಂದ್ರ ಇಂದು ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಇಂದು ಬಿಜೆಪಿ ನಾಗೇಂದ್ರ ರಾಜಭವನಕ್ಕೆ ಪಾದಯಾತ್ರೆ ಮೂಲಕ ತೆರಳಿ ರಾಜ್ಯಪಾಲರಿಗೆ ದೂರು ನೀಡಲಿದೆ.
ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರ ಮತ್ತು ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಹೆಸರು ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ಬಿಜೆಪಿ ಈಗಾಗಲೇ ಹೋರಾಟ ನಡೆಸುತ್ತಿದೆ.
ಇದೀಗ ಸಚಿವರ ರಾಜೀನಾಮೆಗೆ ಸಿಎಂ ಸೂಚಿಸಿದ್ದು ಇಂದೇ ಅವರು ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ಕೇಸ್ ದಾಖಲಿಸಿಕೊಂಡಿದೆ. ಹೀಗಾಗಿ ಸದ್ಯದಲ್ಲೇ ಸಿಬಿಐ ಟೀಂ ತನಿಖೆ ಆರಂಭಿಸಲಿದೆ.
ಈಗಾಗಲೇ ಎಸ್ಐಟಿ ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ಸಹಕಾರಿ ಬ್ಯಾಂಕ್ ನಲ್ಲಿದ್ದ 45 ಕೋಟಿ ರೂ. ಜಪ್ತಿ ಮಾಡಿಕೊಂಡಿದೆ. ಅಲ್ಲದೆ ಪ್ರಕರಣ ಸಂಬಂಧ ಐವರನ್ನು ಬಂಧಿಸಿದೆ. ಇದೆಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆಯಿದೆ.