ಬೆಂಗಳೂರು: ಪಾಂಡವಪುರದಲ್ಲಿ ಆರೆಸ್ಸೆಸ್ ಕಾರ್ಯಾಲಯಕ್ಕೆ ನುಗ್ಗಿ ಅನುಚಿತ ಮತ್ತು ಅನಾಗರಿಕವಾಗಿ ವರ್ತಿಸಿದ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು ಹಾಗೂ ಈ ಬಗ್ಗೆ ತನಿಖಾ ಸಮಿತಿಯನ್ನು ಕೂಡಲೇ ರಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆಗ್ರಹಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಂಡವಪುರದಲ್ಲಿ ಆರೆಸ್ಸೆಸ್ ಕಾರ್ಯಾಲಯಕ್ಕೆ ಒಬ್ಬ ಪೊಲೀಸ್ ಅಧಿಕಾರಿ ಅತಿಕ್ರಮವಾಗಿ ಪ್ರವೇಶ ಮಾಡಿ ಕಾನೂನಿಗೆ ಅಪಚಾರ ಮಾಡಿದ್ದಾರೆ. ಒಂದು ಆವರಣವನ್ನು ಪ್ರವೇಶ ಮಾಡಲು 2 ಹಂತಗಳಲ್ಲಿ ಪೊಲೀಸ್ ಅಧಿಕಾರಿ ಅದನ್ನು ಸಾಬೀತು ಮಾಡಬೇಕಿತ್ತು ಎಂದು ವಿಶ್ಲೇಷಿಸಿದರು.
ಅಲ್ಲಿಗೆ ಹೋಗಲು ಹೇಳಿದವರು ಯಾರು? ಇವರಿಗೆ ಏನು ಮಾಹಿತಿ ಲಭಿಸಿತ್ತು? ಹೋದ ಮೇಲೆ ಕಂಡುಬಂದ ಸ್ಥಿತಿಗತಿ ಏನು? ಎಂದೂ ಅವರು ಪ್ರಶ್ನೆಗಳನ್ನು ಮುಂದಿಟ್ಟರು. ಆವರಣ, ಕಟ್ಟಡ, ಮನೆಯನ್ನು ಪ್ರವೇಶಿಸಲು ಆತ ಸರ್ಚ್ ವಾರಂಟ್ ಹೊಂದಿರಬೇಕಿತ್ತು. ಸರ್ಚ್ ವಾರಂಟ್ ಇಲ್ಲದಿದ್ದರೆ ಕಾರಣವನ್ನು ಸ್ಟೇಷನ್ ಹೌಸ್ ಡೈರಿಯಲ್ಲಿ ಬರೆಯಬೇಕಿತ್ತು. ಆರೋಪಿ ತಪ್ಪಿಸಿಕೊಂಡು, ದೊಡ್ಡ ಅನಾಹುತ ನಡೆಯಬಹುದೆಂದು ಅಥವಾ ಕೊಲೆ, ಸುಲಿಗೆ ನಡೆಯಬಹುದೆಂದು ಮತ್ತು ಅದನ್ನು ತಡೆಯಲು ವಾರಂಟ್ ಇಲ್ಲದೆ ತೆರಳಬಹುದು. ಆದರೆ, ಪಾಂಡವಪುರದಲ್ಲಿ ಪೊಲೀಸ್ ಅಧಿಕಾರಿಗಳು ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಕೆಲವು ಸಮುದಾಯದವರನ್ನು ಓಲೈಸಲು ಕೇವಲ ಭಾರತಮಾತೆಯೇ ಸರ್ವಸ್ವ ಎಂಬ ರಾಷ್ಟ್ರಪ್ರೇಮಿ ಸಂಘಟನೆ ಆರೆಸ್ಸೆಸ್ ಕಾರ್ಯಾಲಯಕ್ಕೆ ಪೊಲೀಸ್ ಅಧಿಕಾರಿಗಳು ಯಾವ ಧೈರ್ಯದಲ್ಲಿ ಪ್ರವೇಶ ಮಾಡಿದ್ದಾರೆ? ಎಂದು ಕೇಳಿದರಲ್ಲದೆ, ಆರೆಸ್ಸೆಸ್ ಸಂಘಟನೆಗೆ ಮಸಿ ಬಳಿಯುವ ಷಡ್ಯಂತ್ರದ ಭಾಗವಾಗಿ ಮತ್ತು ಕೆಲವರನ್ನು ಸಂತುಷ್ಟಗೊಳಿಸುವ ತುಷ್ಟೀಕರಣ ಇದರ ಹಿಂದಿದೆ ಎಂದು ಟೀಕಿಸಿದರು.
ಒಳಕ್ಕೆ ಹೋದ ಬಳಿಕ ಸ್ವಯಂಸೇವಕರ ಜೊತೆ ಅತ್ಯಂತ ಅನಾಗರಿಕವಾಗಿ, ಅನುಚಿತವಾಗಿ ವರ್ತಿಸಿದ್ದಾರೆ. ಪೊಲೀಸರ ಈ ನಡವಳಿಕೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ಆ ಡಿವೈಎಸ್ಪಿಯನ್ನು ತಕ್ಷಣವೇ ಅಮಾನತು ಮಾಡಬೇಕು. ಇದರ ಕುರಿತು ತನಿಖಾ ಸಮಿತಿಯನ್ನು ಕೂಡಲೇ ರಚಿಸಬೇಕು ಎಂದು ಒತ್ತಾಯಿಸಿದರು. ಇದು ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದೆ:
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದೆ. ಈ ತುಂಬಿರುವ ಪಾಪದ ಕೊಡವನ್ನು ಜನರು ಯಾವುದೇ ಕ್ಷಣದಲ್ಲಿ ತುಳುಕಿಸುತ್ತಾರೆ ಎಂದು ಪಿ. ರಾಜೀವ್ ಅವರು ಎಚ್ಚರಿಸಿದರು.
ಕೇಂದ್ರ ಮಾನವ ಹಕ್ಕುಗಳ ಆಯೋಗ ಇದನ್ನು ಗಮನಿಸಬೇಕು ಎಂದು ಅವರು ಮನವಿ ಮಾಡಿದರು. ಕಾನೂನನ್ನು ಎತ್ತಿಹಿಡಿಯುವಲ್ಲಿ ವ್ಯವಸ್ಥೆ ವಿಫಲವಾದಾಗ ವ್ಯಕ್ತಿ, ನಾಗರಿಕರು ಕಾನೂನಿನ ಮೇಲೆ ವಿಶ್ವಾಸ ಕಳಕೊಳ್ಳುತ್ತಾರೆ. ಈ ಹಿಂದೆ ತಾಕತ್ತಿದ್ದರೆ ಬನ್ನಿ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದರು. ಈ ಸರಕಾರ ಜೀವಂತವಾಗಿದ್ದರೆ, ಆ ಥರ ಪ್ರಚೋದನಾತ್ಮಕ ಹೇಳಿಕೆ ಕೊಟ್ಟವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಮಂಗಳೂರಿನ ಘಟನಾವಳಿಯ ಸಂಬಂಧ ಪ್ರಶ್ನೆಗೆ ಉತ್ತರ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪ್ರಾರಂಭವಾದಾಗಿನಿಂದ ಅರಾಜಕತೆ ತನ್ನ ಗರಿಷ್ಠ ತುದಿಯನ್ನು ತಲುಪುತ್ತಿದೆ ಎಂದು ಆಕ್ಷೇಪಿಸಿದರು. ಇಲ್ಲಿ ಉಗ್ರಗಾಮಿ ಚಟುವಟಿಕೆ, ಶಾಂತಿ ಕದಡುವ ಶಕ್ತಿಗಳಿಗೆ ಕಾಂಗ್ರೆಸ್ ಪಕ್ಷವು ರಕ್ಷಣೆ ಕೊಡುತ್ತಿರುವುದರಿಂದ ಕರ್ನಾಟಕದಲ್ಲಿ ಇಷ್ಟೊಂದು ರೀತಿಯ ಗಲಭೆಗಳು ಸೃಷ್ಟಿಯಾಗುತ್ತಿದೆ ಎಂದು ಆರೋಪಿಸಿದರು. ಕರ್ನಾಟಕದ ಜನತೆ ಸರಕಾರದ ರಕ್ಷಣೆ ಬಗ್ಗೆ ನಂಬಿಕೆ ಕಳಕೊಳ್ಳುತ್ತಿದ್ದು, ಸ್ವಯಂರಕ್ಷಣೆ ಕಡೆಗೆ ಹೋಗುತ್ತಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.
ಕಾಂಗ್ರೆಸ್ ಆಡಳಿತವು ತುಷ್ಟೀಕರಣದ ಪರಾಕಾಷ್ಠೆಯನ್ನು ಮುಟ್ಟಿದೆ. ಕಾನೂನು- ಪೊಲೀಸ್ ಇಲಾಖೆಯನ್ನು ಸಂಪೂರ್ಣವಾಗಿ ರಾಜಕೀಯ ದುರುದ್ದೇಶಕ್ಕೆ ಈ ಸರಕಾರ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಅಂಬಿಕಾ ಹುಲಿನಾಯ್ಕರ್, ಹೆಚ್.ಸಿ. ತಮ್ಮೇಶ್ ಗೌಡ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರೀ, ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಠದ ರಾಜ್ಯ ಸಂಚಾಲಕಿ ಶ್ರೀಮತಿ ರೂಪಾ ಅಯ್ಯರ್ ಉಪಸ್ಥಿತರಿದ್ದರು.