ಹೌದು, ಫೋರ್ಟಿಸ್ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ "ರೂಟ್‌ನಂ-15" ಎಂಬ ಶೀರ್ಷಿಕೆಯಡಿಯಲ್ಲಿ, ಹಾರ್ಟ್ ಚೆಕಪ್ ಮೊಬೈಲ್ ವ್ಯಾನ್‌ನನ್ನು ರಸ್ತೆಗಿಳಿಸಿದೆ. ಈ ವಾಹವನ್ನು ಬುಧವಾರ ಕಾರ್ಡಿಯಾಕ್ ಸೈಸನ್ ವಿಭಾಗದ ಮುಖ್ಯಸ್ಥರಾದ ಡಾ.ವಿವೇಕ್ ಜವಳಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ವಿಶ್ವದಲ್ಲಿ 2 ಕೋಟಿಗೂ ಅಧಿಕ ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಭಾರತದಲ್ಲಿಯೇ ಶೇ.60 ರಷ್ಟು ಪ್ರಮಾಣ ಇರುವುದು ಆತಂಕಕಾರಿ ವಿಷಯ. ಬಹುತೇಕರಿಗೆ ಹೃದಯಾಘಾತದ ಬಗ್ಗೆ ಅರಿವಿನ ಕೊರತೆಯಿಂದ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಇದರಿಂದ ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದೆ. ಜೊತೆಗೆ ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಲೂ ಹೃದಯಾಘಾತದ ಪ್ರಮಾಣ ಹೆಚ್ಚಳವಾಗಿದೆ. ಅದರಲ್ಲೂ ಶೇ.25 ರಷ್ಟು ಮಹಿಳೆಯರಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ನಮ್ಮಆಸ್ಪತ್ರೆ ವತಿಯಿಂದ ಹೃದಯದ ಸಮಸ್ಯೆ ಇರುವರಿಗೆ ಅವರ ಮನೆ ಬಾಗಿಲಲ್ಲೇ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಮೊಬೈಲ್ ವಾಹನವನ್ನು ರಸ್ತೆಗಿಳಿಸಿದ್ದೇವೆ. ಇಂದಿನಿಂದ ಈ ವಾಹನ ಸಂಚರಿಸಲಿದೆ. ವಾರದ ಎಲ್ಲಾ ದಿನ ಈ ವಾಹನ ನಗರದ ಅಪಾರ್ಟ್‌ಮೆಂಟ್, ಎಲ್ಲಾ ರೆಸಿಡೆನ್ಸಿಯಲ್ ಪ್ರದೇಶದಲ್ಲಿ ಓಡಾಡಲಿದೆ.