ಕರ್ನಾಟಕದಲ್ಲಿ ಮೋದಿ ಜೊತೆಗೆ ಯೋಗಿ, ಅಮಿತ್ ಶಾ ಪ್ರಚಾರ

Krishnaveni K

ಬುಧವಾರ, 17 ಏಪ್ರಿಲ್ 2024 (15:41 IST)
ಬೆಂಗಳೂರು: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಎಲ್ಲಾ ಪಕ್ಷಗಳಲ್ಲೂ ಪ್ರಚಾರ ರಂಗೇರುತ್ತಿದೆ. ಎಲ್ಲಾ ಪಕ್ಷದ ನಾಯಕರೂ ಈಗ ಪ್ರಚಾರ ಕಣದಲ್ಲಿದ್ದಾರೆ. ಇದೀಗ ಕರ್ನಾಟಕಕ್ಕೆ ಬಿಜೆಪಿಯ ಕೇಂದ್ರ ನಾಯಕರ ದಂಡೇ ಹರಿದುಬರುತ್ತಿದೆ.

ಪ್ರಧಾನಿ ಮೊನ್ನೆ, ಅಮಿತ್ ಶಾ ಈಗಾಗಲೇ ಕರ್ನಾಟಕದಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿ ಹೋಗಿದ್ದಾರೆ. ಮೋದಿ ಮೈಸೂರಿನಲ್ಲಿ ಸಮಾವೇಶ ಮತ್ತು ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು. ಇದೀಗ ಮತ್ತೆ ಏಪ್ರಿಲ್ 20 ರಂದು ರಾಜ್ಯಕ್ಕೆ ಬರುತ್ತಿದ್ದಾರೆ. ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇದೀಗ ಬಿಜೆಪಿ ಕೇಂದ್ರ ನಾಯಕರಾದ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅಮಿತ್ ಶಾ ಕೆಲವು ದಿನಗಳ ಹಿಂದಷ್ಟೇ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ರೋಡ್ ಶೋ ನಡೆಸಿದ್ದರು. ಇದೀಗ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಬಗ್ಗೆ ಇಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ. ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸುಮಾರು 1 ಲಕ್ಷ ಜನರ ನಿರೀಕ್ಷೆ ಇದೆ. ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಲಾಗುತ್ತದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಮಧ್ಯ, ಬೆಂಗಳೂರು ಉತ್ತರ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಸಭೆ ಇದಾಗಿರುತ್ತದೆ. 2 ಕಡೆ ವಿಜಯ ಸಂಕಲ್ಪ ಸಮಾವೇಶ ನಡೆಯಲಿದ್ದು, ಸಿದ್ಧತಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರವಾಸವೂ ಕೂಡ ನಿಗದಿಯಾಗಿದೆ. 23, 24ರಂದು ಕರ್ನಾಟಕದಲ್ಲಿ ವಿವಿಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಭಾಗವಹಿಸುತ್ತಾರೆ. 23ರಂದು ಬೆಳಿಗ್ಗೆ ಯಶವಂತಪುರದಲ್ಲಿ ರೋಡ್ ಷೋ, ಬಳಿಕ ಯಲಹಂಕದಲ್ಲಿ ಸಾರ್ವಜನಿಕ ಸಭೆ ಇರುತ್ತದೆ. ಸಂಜೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಷೋ ಇರುತ್ತದೆ. ನಂತರ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಷೋ ಇರಲಿದೆ ಎಂದು ವಿವರಿಸಿದರು.
24ರಂದು ಬೆಳಿಗ್ಗೆ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆ, ಮಧ್ಯಾಹ್ನ ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಹುಬ್ಬಳ್ಳಿ ರೋಡ್ ಷೋದಲ್ಲಿ ಪಾಲ್ಗೊಳ್ಳುತ್ತಾರೆ.

 
ಇದೇ 24ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕದಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಾರೆ. ಬೆಳಿಗ್ಗೆ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಷೋ, ಮಧ್ಯಾಹ್ನ ಮಡಿಕೇರಿಯಲ್ಲಿ ಸಾರ್ವಜನಿಕ ಸಭೆ, ಸಂಜೆ ಉಡುಪಿಯ ಮಲ್ಪೆಯಲ್ಲಿ ಸಾರ್ವಜನಿಕ ಸಭೆ ಇರುತ್ತದೆ ಎಂದು ವಿವರಿಸಿದರು.

 
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 21ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 24ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ