ಬೆಂಗಳೂರು: ಮೊನ್ನೆಯಷ್ಟೇ ಮೈಸೂರು, ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ್ದ ಪ್ರಧಾನಿ ಮೋದಿ ಮತ್ತೊಮ್ಮೆ ಇದೀಗ ಕರ್ನಾಟಕಕ್ಕೆ ಬರಲಿದ್ದಾರೆ.
ಈ ಬಾರಿ ಚಿಕ್ಕಬಳ್ಳಾಪುರ, ಬೆಂಗಳೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಒಂದೇ ದಿನ ಎರಡೂ ಕಡೆ ಸಮಾವೇಶ ನಡೆಯಲಿದ್ದು, ಎರಡೂ ಕಡೆ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಡಾ. ಕೆ. ಸುಧಾಕರ್ ಸ್ಪರ್ಧಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ಗ್ರಾಮಾಂತರ ಕ್ಷೇತ್ರದಲ್ಲಿ ಗೃಹಸಚಿವ ಅಮಿತ್ ಶಾ ಭರ್ಜರಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದ್ದರು. ಇದೀಗ ಮೋದಿ ಬೆಂಗಳೂರಿನ ಎಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಈ ವೇಳೆ ಬೆಂಗಳೂರಿನ ಎಲ್ಲಾ ಅಭ್ಯರ್ಥಿಗಳು ಹಾಜರಿರಲಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಸಮಾವೇಶದಲ್ಲಿ ಮೋದಿ ಮಾತನಾಡಲಿದ್ದಾರೆ. ಅದಾದ ಬಳಿಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಆಗಮನ ಹಿನ್ನಲೆಯಲ್ಲಿ ಇಂದಿನಿಂದಲೇ ಅರಮನೆ ಮೈದಾನದಲ್ಲಿ ತಯಾರಿ ಆರಂಭವಾಗಿದೆ.
ಮೊನ್ನೆಯಷ್ಟೇ ಮೈಸೂರಿನಲ್ಲಿ ಪ್ರಧಾನಿ ಮೋದಿ ಬಿಜೆಪಿ ಮತ್ತು ಜೆಡಿಎಸ್ ಸಮಾವೇಶದಲ್ಲಿ ಮೋದಿ ಭಾಗಿಯಾಗಿದ್ದರು. ಈ ವೇಳೆ ಎರಡೂ ಪಕ್ಷಗಳೂ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದವು. ಅದಾದ ಬಳಿಕ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು. ಈ ವೇಳೆ ಸಾವಿರಾರು ಜನ ಸೇರಿದ್ದರು.