ಬೆಂಗಳೂರು : ಕಲ್ಯಾಣ ಕರ್ನಾಟಕವನ್ನು ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಅಖಾಡಕ್ಕೆ ಇಳಿದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸಿರುವ ಪ್ರಧಾನಿ ಮೋದಿ ಈಗ ಎಐಸಿಸಿ ಅಧ್ಯಕ್ಷರಾದ ಹಿನ್ನೆಲೆ ಅವರ ತವರಲ್ಲೇ ಕಮಲ ಅರಳಿಸಲು ಪ್ಲ್ಯಾನ್ ಮಾಡಿದ್ದಾರೆ.
ಕರಾವಳಿ, ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದರೂ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಬುಟ್ಟಿಗೆ ಕ್ಷೇತ್ರಗಳು ಹೆಚ್ಚು ಬರುತ್ತಿಲ್ಲ. ಬಿಜೆಪಿ ಹೆಚ್ಚು ಸ್ಥಾನ ಪಡೆದಾಗಲೂ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ವಿಫಲವಾಗಿತ್ತು.
ಕಲ್ಯಾಣ ಕರ್ನಾಟಕದಲ್ಲಿ 18 ಸ್ಥಾನಗಳನ್ನ ಗೆದ್ದು ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಆದರೆ ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ಗಿಂತ ಐದಾರು ಸೀಟ್ ಹೆಚ್ಚು ಗೆಲ್ಲಬೇಕೆಂಬ ಹೈಕಮಾಂಡ್ ಟಾಸ್ಕ್ ನೀಡಿದೆ. ಮುಂಬೈ ಕರ್ನಾಟಕದ ರೀತಿ ಕಲ್ಯಾಣ ಕರ್ನಾಟಕದಲ್ಲೂ ಗೆದ್ದರೆ ಸ್ವತಂತ್ರ ಅಧಿಕಾರದ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.