ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ನೆರೆ ಬಂದಾಗ ಬರುವುದಿಲ್ಲ, ಬರ ಬಂದಾಗಲೂ ಬರುವುದಿಲ್ಲ, ಚುನಾವಣಾ ಪ್ರಚಾರಕ್ಕೆ ಬರುವುದನ್ನು ಮಾತ್ರ ತಪ್ಪಿಸುವುದಿಲ್ಲ. ಹೀಗಿದ್ದರೂ ನಿಮ್ಮ ಬರುವಿಕೆಗಾಗಿ ಆರುವರೆ ಕೋಟಿ ಕನ್ನಡಿಗರು ಕಾತರದಿಂದ ಕಾಯುತ್ತಿದ್ದು, ಅವರ ಪ್ರಶ್ನೆಗೆಳಿಗೆ ನೀವು ಉತ್ತರಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರು ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಮೋದಿಯವರು ಬರಗಾಲದ ಕಷ್ಟಗಳಿಗೆ ನೆರವಾಗುತ್ತಾರೆ, ತೆರಿಗೆಯಲ್ಲಿ ಹೆಚ್ಚಿನ ಪಾಲು ಕೊಡುತ್ತಾರೆ. ವಿಶೇಷ ನೆರವಿನ ಭರವಸೆಯನ್ನು ಈಡೇರಿಸುತ್ತಾರೆ ಎನ್ನುವ ಅವರ ನಿರೀಕ್ಷೆಯನ್ನು ನಿಜ ಮಾಡುತ್ತೀರಾ?
ನರೇಂದ್ರ ಮೋದಿಯವರೇ ನಮ್ಮ ಕನ್ನಡಿಗ ಮತದಾರರು ನಿಮ್ಮ ಮೇಲೆ ಭರವಸೆ ಇಟ್ಟು ಮೊದಲ ಬಾರಿ ಹದಿನೇಳು, ಎರಡನೇ ಬಾರಿ ಇಪ್ಪತ್ತೈದು ಸಂಸದರನ್ನು ನಿಮ್ಮ ಪಕ್ಷದಿಂದ ಗೆಲ್ಲಿಸಿ ಲೋಕಸಭೆಗೆ ಕಳಿಸಿ ನಿಮ್ಮನ್ನು ಪ್ರಧಾನಮಂತ್ರಿ ಮಾಡಿದರು. ನಿಮ್ಮ ಮೇಲೆ ಇಷ್ಟೊಂದು ಪ್ರೀತಿ-ಅಭಿಮಾನ ತೋರಿದ ನಮ್ಮ ಮತದಾರರಿಗೆ ಕಳೆದ ಹತ್ತು ವರ್ಷಗಳಲ್ಲಿ ನೀವು ಮಾಡಿದ ಸಾಧನೆಯನ್ನು ತಿಳಿಸುವುದು ಬೇಡವೇ? ಈ ಬಾರಿಯಾದರೂ ಅದೇ ಹಳೆಯ ಹಿಂದು-ಮುಸ್ಲಿಮ್, ಭಾರತ -ಪಾಕಿಸ್ತಾನ, ಮಂದಿರ -ಮಸೀದಿ ಬಗೆಗಿನ ಟೇಪ್ ರೆಕಾರ್ಡರ್ ಪ್ಲೇ ಮಾಡುವುದನ್ನು ಕಡಿಮೆ ಮಾಡಿ ನಿಮ್ಮ ಹತ್ತು ವರ್ಷಗಳ ಸಾಧನೆಯ ಬಗ್ಗೆ ಹತ್ತು ನಿಮಿಷ ಮಾತನಾಡುತ್ತೀರಾ? ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ನಿಮ್ಮ ಸರ್ಕಾರದ ಮೇಲಿನ ಆರೋಪಗಳಿಗೆ ಉತ್ತರ ನೀಡುತ್ತೀರಾ?
ಚುನಾವಣಾ ಕಾಲದಲ್ಲಿ ರಾಜಕೀಯ ಪಕ್ಷಗಳು ಬಿಡುಗಡೆಗೊಳಿಸುವ ಪ್ರಣಾಳಿಕೆ ಎನ್ನುವುದು ಕೇವಲ ಭರವಸೆಗಳ ಕಂತೆ ಅಲ್ಲ, ಅದು ಮತದಾರನಿಗೆ ಕೊಡುವ ಗ್ಯಾರಂಟಿ. ಚುನಾವಣೆಯಲ್ಲಿ ಆಯ್ಕೆಯಾದ ಪಕ್ಷ ಐದು ವರ್ಷಗಳ ನಂತರ ಪ್ರಣಾಳಿಕೆಯಲ್ಲಿ ಈಡೇರಿಸಲಾದ ಭರವಸೆಯ ಲೆಕ್ಕವನ್ನು ಮತದಾರರಿಗೆ ಕೊಡಬೇಕು. ಈ ಕೆಲಸವನ್ನು ಒಬ್ಬ ಮುಖ್ಯಮಂತ್ರಿಯಾಗಿ ನಿಷ್ಠೆ ಮತ್ತು ಜವಾಬ್ದಾರಿಯಿಂದ ಮಾಡುತ್ತಾ ಬಂದ ನನಗೆ ನಿಮ್ಮ ವೈಫಲ್ಯವನ್ನು ಪ್ರಶ್ನಿಸುವ ನೈತಿಕ ಅಧಿಕಾರ ಇದೆ ಎಂದು ತಿಳಿದುಕೊಂಡಿದ್ದೇನೆ. ನೀವು ಹಿಂದಿನ ಚುನಾವಣೆಯ ಪ್ರಣಾಳಿಕೆಯ ಲೆಕ್ಕವನ್ನು ಕೊಟ್ಟಿಲ್ಲ, ಈ ಚುನಾವಣೆಯ ಪ್ರಣಾಳಿಕೆಯನ್ನು ಇನ್ನೂ ಬಿಡುಗಡೆಗೊಳಿಸಿಲ್ಲ. ಇದು ಮತದಾರರ ಬಗೆಗಿನ ನಿರ್ಲಕ್ಷ್ಯ ಮಾತ್ರವಲ್ಲ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬಗೆಗಿನ ತಿರಸ್ಕಾರವೂ ಹೌದಲ್ಲವೇ?
ಬರಪರಿಹಾರ ಮತ್ತು ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯಕ್ಕೆ ಸಂಬಂಧಿಸಿದಂತೆ ನಿಮ್ಮದೇ ಸರ್ಕಾರದ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿರ್ಲಜ್ಜತೆಯಿಂದ ಸುಳ್ಳುಗಳನ್ನು ಹೇಳಿಹೋಗಿದ್ದಾರೆ. ಕಳೆದ ವರ್ಷದ ಡಿಸೆಂಬರ್ 19ರಂದು ನಾನೇ ಖುದ್ದಾಗಿ ನಿಮ್ಮಲ್ಲಿಗೆ ಬಂದು ಬರಪರಿಹಾರ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದೆ. ಡಿಸೆಂಬರ್ 23ಕ್ಕೆ ತಮ್ಮ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯ ಸಭೆ ನಡೆಸಿ ತೀರ್ಮಾನಿಸುವುದಾಗಿ ಗೃಹಸಚಿವರೇ ಆಶ್ವಾಸನೆ ನೀಡಿದ್ದರು. ಹೀಗಿದ್ದರೂ ಬರಪರಿಹಾರ ಕೋರಿ ವಿಳಂಬವಾಗಿ ಮನವಿ ಮಾಡಿದ್ದೆವು ಎಂದು ಹೇಳುವುದು ಸುಳ್ಳಲ್ಲವೇ ಪ್ರಧಾನಿಗಳೇ?
ಕರ್ನಾಟಕ ಸರ್ಕಾರ ಬರಪರಿಹಾರ ಕೋರಿ ವಿಳಂಬವಾಗಿ ಮನವಿ ಸಲ್ಲಿಸಿರುವ ಕಾರಣದಿಂದಾಗಿ ಚುನಾವಣಾ ಆಯೋಗ ಪರಿಹಾರ ಬಿಡುಗಡೆಗೆ ಅನುಮತಿ ನೀಡಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬರಪರಿಹಾರ ಕೋರಿ ನಮ್ಮ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು ಕಳೆದ ವರ್ಷದ ಸೆಪ್ಟೆಂಬರ್ 23ರಂದು, ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು ಮಾರ್ಚ್ 16ರಂದು. ರಾಜ್ಯ ಸರ್ಕಾರದ ಒಂದು ಮನವಿ ಪತ್ರವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಐದು ತಿಂಗಳು ಬೇಕೇ ಪ್ರಧಾನಿಗಳೇ? ಇದೇನಾ ನೀವು ಹೇಳುವ "Less Government , More Governance?"
ತೆರಿಗೆ ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ನಾವು ದನಿ ಎತ್ತಿದರೆ ನಮ್ಮದು ದೇಶದ್ರೋಹ ಎನ್ನುತ್ತೀರಿ? ಹಾಗಿದ್ದರೆ ಇದೇ ತೆರಿಗೆ ಹಂಚಿಕೆಯಲ್ಲಿನ ತಾರತಮ್ಯದ ಬಗ್ಗೆ ಗುಜರಾತ್ ಮುಖ್ಯಮಂತ್ರಿಯಾಗಿ ಮೊದಲು ದನಿ ಎತ್ತಿದ್ದ ನೀವೂ ದೇಶದ್ರೋಹಿ ಅಲ್ಲವೇ? ಕೇಂದ್ರ ಸರ್ಕಾರಕ್ಕೆ ನಾವು 60,000 ಕೋಟಿ ರೂಪಾಯಿ ಕೊಡುತ್ತೇವೆ ಅದರಲ್ಲಿ ಶೇಕಡಾ 2.5ರಷ್ಟು ಮಾತ್ರ ವಾಪಸು ನೀಡಲಾಗುತ್ತದೆ. ಗುಜರಾತ್ ಭಿಕ್ಷುಕ ರಾಜ್ಯವೇ? ಎಂದು ಮುಲಾಜಿಲ್ಲದೆ ಪ್ರಶ್ನಿಸಿದ್ದವರು ನೀವೇ ಅಲ್ಲವೇ?
ಜಾತಿ, ಧರ್ಮ, ಭಾಷೆ, ಪ್ರದೇಶವನ್ನು ಮೀರಿದ್ದು ಪ್ರಧಾನಿ ಪಟ್ಟ. ಆದರೆ ನೀವು ಕನ್ನಡ-ಕನ್ನಡಿಗ-ಕರ್ನಾಟಕದ ವಿರೋಧಿ ಎನ್ನುವ ಅಭಿಪ್ರಾಯ ಕನ್ನಡಿಗರಲ್ಲಿದ್ದರೆ ಅದಕ್ಕೆ ನೀವೇ ಹೊಣೆ ಅಲ್ಲವೇ? ಕರ್ನಾಟಕದ ನೆಲ, ಜಲ, ಭಾಷೆ ಬಗ್ಗೆ ನಾವು ಮಾತನಾಡಿದರೆ ದೇಶದ್ರೋಹ ಎನ್ನುತ್ತೀರಿ. ಕನ್ನಡದ ಮೇಲೆ ಹಿಂದಿ ಹೇರುವ ಹುನ್ನಾರವನ್ನು ಪ್ರತಿಭಟಿಸಿದರೆ, ಕನ್ನಡಕ್ಕೊಂದು ಧ್ವಜ ಕೇಳಿದರೆ, ನಮ್ಮ ರಾಜ್ಯದ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಕೇಂದ್ರ ಸರ್ಕಾರದ ಸ್ವಾಮ್ಯದ ಸಂಸ್ಥೆಗಳ ನೇಮಕಾತಿಯ ಪರೀಕ್ಷೆ ಬರೆಯಲು ಅವಕಾಶ ಕೇಳಿದರೆ ದೇಶದ್ರೋಹ ಎನ್ನುತ್ತೀರಿ. ವಿಶ್ವಗುರು ಎಂದು ಕರೆಸಿಕೊಳ್ಳುವ ನೀವು ವಿಶ್ವಮಾನವರಾಗುವುದು ಯಾವಾಗ?
ಮೈಸೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದೀರಿ. ಆ ಕ್ಷೇತ್ರಗಳಲ್ಲಿ ಲೋಕಸಭಾ ಸದಸ್ಯರಾಗಿದ್ದ ನಿಮ್ಮ ಇಬ್ಬರು ಶಿಷ್ಯರಿಗೆ ಈ ಬಾರಿ ನೀವು ಟಿಕೆಟ್ ನಿರಾಕರಿಸಿದ್ದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ. ಈ ಟಿಕೆಟ್ ನಿರಾಕರಣೆಗೆ ಕಾರಣಗಳನ್ನು ನಿಮ್ಮ ಪಕ್ಷದವರೇ ಕತೆ ಕಟ್ಟಿ ಹೇಳುತ್ತಿದ್ದಾರೆ. ನಿಜವಾದ ಕಾರಣಗಳೇನು ಎನ್ನುವುದನ್ನು ನೀವೇ ಸ್ಪಷ್ಟಪಡಿಸುತ್ತೀರಾ?