ಮೋದಿ ಭಾಷಣ ಕೇವಲ ಚುನಾವಣಾ ಗಿಮಿಕ್: ಸಚಿವ ಯು.ಟಿ. ಖಾದರ್

ಮಂಗಳವಾರ, 3 ಜನವರಿ 2017 (14:22 IST)
ವರ್ಷಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ಕೇವಲ ಚುನಾವಣಾ ಗಿಮಿಕ್ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದರು.
 
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶಾದ್ಯಂತ ಏಕಾಏಕಿ 500. 1000 ಮುಖಬೆಲೆಯ ನೋಟು ನಿಷೇಧದ ಬಳಿಕ ಉಂಟಾದ ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು. 
 
ಐವತ್ತು ದಿನಗಳಲ್ಲಿ ಸಮಸ್ಯೆ ಬಗೆಹರಿಯದ ಬಗ್ಗೆ ದೇಶದ ಜನತೆಯಲ್ಲಿ ಕ್ಷಮೆಯಾಚಿಸುವ ಸೌಜನ್ಯವನ್ನು ಸಹ ಪ್ರಧಾನಿ ನರೇಂದ್ರ ಮೋದಿ ತೋರಿಲ್ಲ. ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚೆ ನಡೆಸಬೇಕಿತ್ತು. ಆದರೆ, ಪ್ರಧಾನಿ ಅವರು ಕಾರ್ಪೋರೇಟ್ ಕಂಪನಿಗಳ ಮುಖಂಡರೊಂದಿಗೆ ಮಾತ್ರ ಚರ್ಚೆ ನಡೆಸಿ ನೋಟು ನಿಷೇಧವನ್ನು ಜಾರಿಗೊಳಿಸಿದ್ದಾರೆ. 
 
ನೋಟು ನಿಷೇಧದ ಬಳಿಕ ಎಟಿಎಂ ಕೇಂದ್ರಗಳಲ್ಲಿ ಹಣ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದಾಗ ಸತ್ತವರ ಬಗ್ಗೆ ಸ್ಮರಣೆ ಮಾಡಿಲ್ಲ. ಕೇಂದ್ರ ಸರಕಾರದ ನಿರ್ಧಾರ ವಿರೋಧಿಸಿ ಕಾಂಗ್ರೆಸ್ ದೊಡ್ಡ ಮಟ್ಟದ ಹೋರಾಟ ನಡೆಸಲಿದೆ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ