ಅಯೋಧ್ಯೆ ದೀಪೋತ್ಸವದಲ್ಲಿ ಭಾಗಿಯಾಗಲಿರುವ ಮೋದಿ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ದೀಪೋತ್ಸವ ನಡೆಸಲಾಗ್ತಿದ್ದು, ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ. ಅಯೋಧ್ಯೆಯ ದೀಪೋತ್ಸವ ಬಹಳ ವಿಶೇಷವಾದುದು. ಶ್ರೀರಾಮ ತನ್ನ 14 ವರ್ಷದ ವನವಾಸ ಮುಗಿಸಿ ವಾಪಾಸ್ ಬಂದ ನಂತರ ಜನರು ಇಡೀ ಅಯೋಧ್ಯೆಯನ್ನು ದೀಪಗಳಿಂದ ಅಲಂಕರಿಸಿ, ಸಂಭ್ರಮಿಸಿದ್ದರು ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ದೀಪಾವಳಿ ಬಹಳ ಪ್ರಸಿದ್ಧಿ ಪಡೆದಿದೆ. ಅಯೋಧ್ಯೆಯ ಆಲಯದ ಘಾಟ್‌ನಲ್ಲಿ ಇಂದು 15 ಲಕ್ಷ ಹಣತೆಗಳು ಬೆಳಗಲಿವೆ. ಈ ಬಾರಿ ಪ್ರಧಾನಿ ಮೋದಿ ಅಯೋಧ್ಯೆಯ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರದ ಪ್ರವಾಸಿ ತಾಣವನ್ನು ವೀಕ್ಷಿಸುತ್ತಾರೆ. ಬಳಿಕ ಶ್ರೀರಾಮನ ರಾಜ್ಯಾಭಿಷೇಕ ವೀಕ್ಷಿಸಲು ಪ್ರಧಾನಮಂತ್ರಿ ಶ್ರೀರಾಮ ಕಥಾ ಪಾರ್ಕ್‌ನಲ್ಲಿ ಉಪಸ್ಥಿತರಿರಲಿದ್ದಾರೆ. ಬಳಿಕ, ಸಂಜೆ 6.30ಕ್ಕೆ ಸರಯೂ ಘಾಟ್‌ನಲ್ಲಿ ಆರತಿಯಲ್ಲಿ ಭಾಗವಹಿಸಲಿದ್ದಾರೆ. ನಂತರ ರಾಮ್ ಕಿ ಪೌಡಿ ಘಾಟ್‌ಗಳಲ್ಲಿ ದೀಪೋತ್ಸವದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.