ಬೆಂಗಳೂರು: ಭ್ರಷ್ಟಾಚಾರ ಮತ್ತು ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ಕಿಡಿಕಾರಿದ್ದ ಉದ್ಯಮಿ ಮೋಹನ್ ದಾಸ್ ಪೈ ಅವರು ಮತ್ತೆ ಸಿದ್ದರಾಮಯ್ಯ ಸರ್ಕಾರದ ಕಿವಿಹಿಂಡಿದ್ದಾರೆ.
ಮುಖ್ಯಮಂತ್ರಿಗಳೇ ನಿಮ್ಮ ಇಲಾಖೆಗಳಲ್ಲಿ ಭ್ರಷ್ಟಾಚಾರ ಭಾರೀ ಹೆಚ್ಚಾಗಿದೆ. ಒಂದೊಂದು ಇಲಾಖೆಗಳೂ ರೇಡ್ ಕಾರ್ಡ್ ಇಟ್ಟುಕೊಂಡಿವೆ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಟೀಕಿಸಿದ್ದ ಉದ್ಯಮಿ ಪೈ ಅವರು ಬೆಂಗಳೂರು ರಸ್ತೆಯ ಅವ್ಯವಸ್ಥೆ ಬಗ್ಗೆ ಟೀಕಿಸಿದ್ದರು. ಇದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಇದನ್ನೆ ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕೈಗಾರಿಕೆ ಅನುಮೋದನೆಗೆ ಕಾಲಮಿತಿ, ಹೂಡಿಕೆದಾರರಿಗೆ ಸಮಸ್ಯೆ ತಪ್ಪಿಸಲು ಏಕಗವಾಕ್ಷಿ ಯೋಜನೆಯಡಿ ಅನುಮೋದನೆಗೆ ರಾಜ್ಯ ಸರ್ಕಾರ ಪ್ಲ್ಯಾನ್ ಮಾಡಿದೆ. ಅದಕ್ಕಾಗಿ ನೆರೆಯ ರಾಜ್ಯಗಳಲ್ಲಿ ಅನುಮೋದನೆ ಸಿಗುತ್ತಿರುವ ಬಗ್ಗೆ ಅಧ್ಯಯನಕ್ಕೆ ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಅವರು ಹಲವು ಸಲಹೆಯನ್ನೂ ನೀಡಿದ್ದಾರೆ.
ಮುಖ್ಯಮಂತ್ರಿಗಳೇ ನಿಮ್ಮ ಯೋಚನೆಗೆ ಧನ್ಯವಾದಗಳು. ಆದರೆ, ಅಧಿಕಾರಿಗಳು ಸಹ ನಂತರ ಅನುಮೋದನೆ ನೀಡಬೇಕಾಗಿರೋದ್ರಿಂದ ಏಕಗವಾಕ್ಷಿ ಯೋಜನೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಏಕೆಂದರೆ ಇಲಾಖೆಗಳಲ್ಲಿ ಭ್ರಷ್ಟಾಚಾರ ತೀರಾ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಒಂದೊಂದು ಇಲಾಖೆಯಲ್ಲಿಯೂ ರೇಟ್ ಕಾರ್ಡ್ ಇಟ್ಟುಕೊಂಡಿದ್ದಾರೆ. ಆದ್ದರಿಂದ ದಯವಿಟ್ಟು ಆಂಧ್ರಪ್ರದೇಶದ ಮಾದರಿಯಲ್ಲಿ ಸೆಲ್ಫ್ ಸರ್ಟಿಫಿಕೇಟ್ ಸಿಗುವಂತೆ (ಸ್ವಯಂ ಪ್ರಮಾಣೀಕರಣಗಳ ಮೇಲೆ ಅನುಮೋದನೆಯನ್ನು ಸ್ವಯಂಚಾಲಿತವಾಗಿ ಮಾಡಿ) ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸಿ ಎಂದು ಅವರು ಮನವಿ ಮಾಡಿದ್ದಾರೆ.