ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ

ಶನಿವಾರ, 11 ಸೆಪ್ಟಂಬರ್ 2021 (13:08 IST)
ಬೆಂಗಳೂರು, ಸೆ.11 : ವಿಧಾನ ಮಂಡಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ಎಲ್ಲಾ ಶಾಸಕರಿಗೆ ಈಗಾಗಲೆ ಆಹ್ವಾನ ನೀಡಲಾಗಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯ ಅಧ್ಯಕ್ಷರಾದ ಹೆಚ್.ಕೆ. ಕುಮಾರಸ್ವಾಮಿ ಸೇರಿದಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಧಿವೇಶನದಲ್ಲಿ ಪಕ್ಷದ ವತಿಯಿಂದ ಪ್ರಸ್ತಾಪಿಸಬೇಕಾಗಿರುವ ವಿಚಾರಗಳ ಬಗ್ಗೆ ಗಂಭೀರ ಸಮಾಲೋಚನೆ ನಡೆಯಲಿದೆ. ಸದನದ ಒಳ- ಹೊರಗೆ ನಡೆಸುವ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲಾಗುತ್ತದೆ. ಈಗಾಗಲೇ ಪ್ರಸ್ತಾಪಿಸಿರುವಂತೆ ಮೇಕೆದಾಟು, ಮಹದಾಯಿ, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೆ ಹಂತ ಸೇರಿದಂತೆ ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ಜೆಡಿಎಸ್ ಚರ್ಚಿಸಲು ನಿರ್ಧರಿಸುವ ಸಾಧ್ಯತೆಗಳಿವೆ.
ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿಕೆಯಲ್ಲಿನ ತಾರತಮ್ಯ, ಬೆಲೆ ಏರಿಕೆ, ಕಾಡಾನೆ ಹಾವಳಿ, ಅತಿವೃಷ್ಟಿ ಸಮಸ್ಯೆ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ತೀರ್ಮಾನಿಸಲಾಗುತ್ತದೆ. ಆದ್ಯತೆ ಮೇಲೆ ಯಾವ ಯಾವ ವಿಚಾರಗಳನ್ನು ಪ್ರಸ್ತಾಪಿಸಿ ಉತ್ತರ ಪಡೆಯಬೇಕು ಎಂಬ ಬಗ್ಗೆ ಶಾಸಕರಿಗೆ ವರಿಷ್ಠರು ಮಾರ್ಗದರ್ಶನ ಮಾಡುವ ಸಾಧ್ಯತೆಗಳಿವೆ.
ಅಲ್ಲದೆ, ಮುಂಬರುವ ಬಿಬಿಎಂಪಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಸಿದ್ಧತೆ ಬಗ್ಗೆಯೂ ಗಂಭೀರ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಪಕ್ಷದ ಸದಸ್ಯತ್ವ ನೋಂದಣಿಯನ್ನು ಚುರುಕುಗೊಳಿಸುವುದು, ಪಕ್ಷ ಸಂಘಟನೆಗೆ ಒತ್ತು ನೀಡುವುದು, ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಗ್ಗೆಯೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ.
ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗಳಿಗೆ ಪರಿಹಾರ, ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ವಿಳಂಬ, ಕೋವಿಡ್ ಸಮಸ್ಯೆ ನಿರ್ವಹಿಸಿದ ರೀತಿ, ಲಸಿಕೆ ನೀಡಿಕೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ.
ಸೋಮವಾರದಿಂದ ವಿಧಾನಮಂಡಲದ ಅಧಿವೇಶನ ಆರಂಭವಾದರೂ ಮೊದಲ ದಿನ ಇತ್ತೀಚೆಗೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಮಂಗಳವಾರದಿಂದ ಕಾರ್ಯಕಲಾಪಗಳು ನಡೆಯಲಿದ್ದು, ಆ ಸಂದರ್ಭದಲ್ಲಿ ಪಕ್ಷದ ತೀರ್ಮಾನದಂತೆ ಉಭಯ ಸದನಗಳಲ್ಲಿ ವಿಷಯ ಪ್ರಸ್ತಾಪಿಸಲಾಗುತ್ತದೆ.
ತಮ್ಮ ತಮ್ಮ ಕ್ಷೇತ್ರಗಳಲ್ಲಿರುವ ಶಾಸಕರು ಅಧಿವೇಶನಕ್ಕೆ ಆಗಮಿಸುವ ಹಿನ್ನೆಯಲ್ಲಿ ಎಲ್ಲರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸೋಮವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿಷಯಾಧಾರಿತ ಚರ್ಚೆಯಲ್ಲಿ ಜೆಡಿಎಸ್ ಭಾಗವಹಿಸುವ ಸಾಧ್ಯತೆಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ