ಬೆಳಗಾವಿಯಲ್ಲಿ ಈ ಬಾರಿಯ ಮಳೆಗಾಲದ ವಿಧಾನಮಂಡಲ ಅಧಿವೇಶನ..?

ಸೋಮವಾರ, 12 ಜುಲೈ 2021 (11:35 IST)
ಬೆಂಗಳೂರು(ಜು.12):  ಕಳೆದ ಎರಡು ವರ್ಷಗಳಿಂದಲೂ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ಸರ್ಕಾರ ಅಧಿವೇಶನವನ್ನೇ ನಡೆಸಲಿಲ್ಲ. ಒಂದು ಪ್ರವಾಹದಿಂದ ಮತ್ತೊಂದು ಕೊರೋನಾದಿಂದ ಈ ಎರಡು ಕಾರಣಗಳಿಂದ ಎರಡು ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಿಲ್ಲ.

ಆದರೆ ಈ ಬಾರಿಯ ಮಳೆಗಾಲದ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಕಳೆದ ಅಧಿವೇಶನದ ಸಂದರ್ಭದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿತ್ತು. ನಂತರ ಮುಂದಿನ ಅಧಿವೇಶನ ಅಲ್ಲೇ ನಡೆಸುವ ಬಗ್ಗೆ ಅಂದು ಆಲೋಚನೆ ಮಾಡಲಾಗಿತ್ತು. ಅದರಂತೆ ಈಗ ಈ ಬಾರಿಯ ಮಳೆಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲೇ ನಡೆಸಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ಗುರುವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಂದು ಎಲ್ಲಾ ಸಚಿವರ ಜೊತೆ ಚರ್ಚಿಸಿ ಸಿಎಂ ಯಡಿಯೂರಪ್ಪ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಇನ್ನು, ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕೂಡ ಈ ಬಗ್ಗೆ ಸರ್ಕಾಕ್ಕೆ ಪತ್ರ ಬರೆದಿದ್ದಾರೆ. ಕಳೆದೆರೆಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಆಗಿಲ್ಲ. ಆದರೆ ಈ ಬಾರಿ ಕೊರೋನಾ ಕಡಿಮೆ ಆಗಿರೋದ್ರಿಂದ ಬೆಳಗಾವಿಯಲ್ಲೇ ಅಧಿವೇಶನ ನಡೆಸಬಹುದು. ಈ ಮೂಲಕ ಉತ್ತರ ಕರ್ನಾಟಕ ಸಮಸ್ಯೆ ಗಳ ಬಗ್ಗೆ ಚರ್ಚಿಸಿ, ಅದಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡಬಹುದು ಎಂದು ಪತ್ರದಲ್ಲಿ ಬರೆದಿದ್ದಾರೆ.
ಇತ್ತ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರದ್ದು ಕೂಡ ಇದೇ ಅಭಿಪ್ರಾಯವಾಗಿದೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದ ಶಾಸಕರ ಆಗ್ರಹದಿಂದ ಸ್ಪೀಕರ್ ಕಾಗೇರಿ, ಈ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಿದ್ರೆ ಒಳ್ಳೆಯದು ಎಂಬ ಒಲವು ತೋರಿದ್ದಾರೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಇದಕ್ಕೆ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಯಾಕೆಂದರೆ ಕೊರೊನಾ ಸಂದರ್ಭದಲ್ಲಿ ಇಲ್ಲಿಂದ ಬೆಳಗಾವಿಗೆ ಎಲ್ಲಾ ಶಿಫ್ಟ್ ಮಾಡಿ, ಅಧಿವೇಶನಕ್ಕೆ ಸಿದ್ದತೆ ಕಷ್ಟ ಎಂಬ ಮನಸ್ಥಿತಿಗೆ ಬಂದಿದ್ದಾರೆ ಎನ್ನಲಾಗಿದೆ.
ಇನ್ನೂ ರಾಜ್ಯದಲ್ಲಿ ಸದ್ಯಕ್ಕೆ ಕೊರೊನಾ ಸೋಂಕು ಕಡಿಮೆಯಾಗಿದ್ದರೂ ಕೂಡ 3ನೇ ಅಲೆ ಭೀತಿ ಮಾತ್ರ ಕಡಿಮೆಯಾಗಿಲ್ಲ. ಆಗಸ್ಟ್ ಕೊನೆಯ ವಾರದಲ್ಲಿ ಮೂರನೇ ಅಲೆ ಬರುವ ಬಗ್ಗೆ ಈಗಾಗಲೇ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.  ಜೊತೆಗೆ ಮಹಾರಾಷ್ಟ್ರದ ಡೆಲ್ಟಾ ವೈರಸ್ ಆತಂಕವೂ ಕೂಡ ಇದೆ. ಯಾಕೆಂದರೆ ಬೆಳಗಾವಿಗೆ ಹತ್ತಿರ ಇರೋದೇ ಮಹಾರಾಷ್ಟ್ರ. ಹೀಗಾಗಿ ಅಲ್ಲಿಂದ
ಬಂದವರಿಂದ ಬೆಳಗಾವಿಯಲ್ಲಿ ಕೊರೋನಾ ಹರಡಿದ್ರೆ ಇಲ್ಲಿಂದ ಬೆಳಗಾವಿಗೆ ಹೋಗಿದ್ದವರಿಗೆ ಕೊರೋನಾ ಹರಡುವ ಭೀತಿ ಇದೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ, ಮಳೆಗಾಲದ ಅಧಿವೇಶನವನ್ನು ಬೆಳಗಾವಿ ಯಲ್ಲಿ ನಡೆಸಬೇಕಾ ಅಥವಾ ಬೆಂಗಳೂರಲ್ಲಿ ನಡೆಸಬೇಕಾ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ